ADVERTISEMENT

ಎಂಎಸ್‌ಎಂಇಗೆ ಸುಲಭ ಸಾಲ: ಕೇಂದ್ರದ ಪ್ರಯತ್ನ

ಪಿಟಿಐ
Published 27 ಜೂನ್ 2022, 16:01 IST
Last Updated 27 ಜೂನ್ 2022, 16:01 IST

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡುವ ದಿಸೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಎಂಎಸ್‌ಎಂಇ ಕಾರ್ಯದರ್ಶಿ ಬಿ.ಬಿ. ಸ್ವೈನ್‌ ತಿಳಿಸಿದ್ದಾರೆ.

ವಿಶ್ವ ಎಂಎಸ್‌ಎಂಇ ದಿನದ ಅಂಗವಾಗಿ ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕೈಗೆಟಕುವ ದರಕ್ಕೆ ಸಾಲ ಪಡೆಯುವುದು ಎಲ್ಲರಿಗೂ, ಅದರಲ್ಲಿಯೂ ಮುಖ್ಯವಾಗಿ ಎಂಎಸ್‌ಎಂಇಗಳಿಗೆ, ಸವಾಲಾಗಿದೆ. ಇದನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಮಾರುಕಟ್ಟೆ ಪಾಲು ನಷ್ಟ: ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಎಂಎಸ್‌ಎಂಇ ಕಂಪನಿಯು ದೊಡ್ಡ ಕಂಪನಿಗಳಿಗೆ ತಾನು ಹೊಂದಿದ್ದ ಮಾರುಕಟ್ಟೆ ಪಾಲಿನಲ್ಲಿ ಶೇಕಡ 3ರಷ್ಟು ಅಥವಾ ಅದಕ್ಕೂ ಹೆಚ್ಚನ್ನು ಬಿಟ್ಟುಕೊಟ್ಟಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ADVERTISEMENT

ಒಟ್ಟಾರೆ ₹ 47 ಲಕ್ಷ ಕೋಟಿ ವರಮಾನ ಇರುವ 69 ವಲಯಗಳು ಮತ್ತು 147 ಕ್ಲಸ್ಟರ್‌ಗಳ ಮಾಹಿತಿ ಸಂಗ್ರಹಿಸಿ ಸಂಸ್ಥೆಯು ಈ ವರದಿ ನೀಡಿದೆ.

ಸರ್ಕಾರಕ್ಕೆ ಒತ್ತಾಯ: ಎಂಸ್‌ಎಂಇಗಳಿಗೆ ರಿಯಾಯಿತಿ ದರದಲ್ಲಿ ಹಣಕಾಸು ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಡಾ.ಐ.ಎಸ್. ಪ್ರಸಾದ್ ಅವರು ಬೆಂಗಳೂರಿನಲ್ಲಿ ನಡೆದ ಎಂಎಸ್‌ಎಂಇ ದಿನಾಚರಣೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ, ‘ಸಣ್ಣ ಉದ್ದಿಮೆಗಳು ದೊಡ್ಡ ಕಂಪನಿಗಳಾಗಿ ಬೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು. ಕಚ್ಚಾ ಸಾಮಗ್ರಿಗಳು ಕಡಿಮೆ ಬೆಲೆಗೆ ಸಿಗುವಂತೆ ಆಗಬೇಕು. ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ, ಹಣಕಾಸಿನ ನೆರವು ಹೀಗೆ ಇನ್ನೂ ಹಲವು ಅಂಶಗಳು ಎಂಎಸ್‌ಎಂಇಗಳ ಬೆಳವಣಿಗೆಗೆ ಮುಖ್ಯವಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.