ADVERTISEMENT

ಮಾರ್ಚ್‌ನಲ್ಲಿ ₹ 1.42 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಸಾರ್ವಕಾಲಿಕ ಗರಿಷ್ಠ

ಪಿಟಿಐ
Published 1 ಏಪ್ರಿಲ್ 2022, 15:38 IST
Last Updated 1 ಏಪ್ರಿಲ್ 2022, 15:38 IST
ಜಿಎಸ್‌ಟಿ: ಐಸ್ಟಾಕ್ ಚಿತ್ರ
ಜಿಎಸ್‌ಟಿ: ಐಸ್ಟಾಕ್ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಮಾರ್ಚ್‌ ತಿಂಗಳಿನಲ್ಲಿ ₹ 1.42 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯಡಿ ಈವರೆಗೆ ‌ಸಂಗ್ರಹ ಆಗಿರುವುದರಲ್ಲೇ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಮೊದಲು 2022ರ ಜನವರಿಯಲ್ಲಿ ₹ 1.40 ಲಕ್ಷ ಕೋಟಿಗಳಷ್ಟು ಗರಿಷ್ಠ ವರಮಾನ ಸಂಗ್ರಹ ಆಗಿತ್ತು. ಫೆಬ್ರುವರಿಯಲ್ಲಿ ₹ 1.33 ಲಕ್ಷ ಕೋಟಿ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇ 15ರಷ್ಟು ಹೆಚ್ಚು ಸಂಗ್ರಹ ಆದಂತಾಗಿದೆ.

ತೆರಿಗೆ ದರದಲ್ಲಿ ಪರಿಷ್ಕರಣೆ ಮತ್ತು ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟದ ವರಮಾನ ಸಂಗ್ರಹ ಆಗಿದೆ ಎಂದು ಸಚಿವಾಲಯವು ಹೇಳಿದೆ.

ADVERTISEMENT

ಮಾರ್ಚ್‌ನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ತೆರಿಗೆಯಲ್ಲಿ ಸಿಜಿಎಸ್‌ಟಿ ₹ 25,830 ಕೋಟಿ, ಎಸ್‌ಜಿಎಸ್‌ಟಿ ₹ 32,378 ಕೋಟಿ, ಐಜಿಎಸ್‌ಟಿ ₹ 74,470 ಕೋಟಿ ಹಾಗೂ ಸೆಸ್‌ ₹ 9,417 ಕೋಟಿ ಒಳಗೊಂಡಿದೆ.

ವಾರ್ಷಿಕವಾಗಿ ₹ 20 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುವವರು ಸಹ ಇ–ಇನ್‌ವಾಯ್ಸ್‌ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ತೆರಿಗೆ ಸಂಗ್ರಹವು ಇನ್ನಷ್ಟು ಹೆಚ್ಚಾಗಲಿದೆ ಎಂದು ಎನ್‌ಎ ಶಾ ಅಸೋಸಿಯೇಟ್ಸ್‌ನ ಪಾಲುದಾರ ಪರಾಗ್‌ ಮೆಹ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.