ADVERTISEMENT

ತಗ್ಗಿದ ತೆರಿಗೆ ವಂಚನೆ: ಜಿಎಸ್‌ಟಿ ₹1.59 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 1 ಸೆಪ್ಟೆಂಬರ್ 2023, 16:04 IST
Last Updated 1 ಸೆಪ್ಟೆಂಬರ್ 2023, 16:04 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಗ್ರಹ ಆಗಿದ್ದ ವರಮಾನಕ್ಕೆ ಹೋಲಿಸಿದರೆ (₹1.43 ಲಕ್ಷ ಕೋಟಿ) ಶೇ 11ರಷ್ಟು ಏರಿಕೆ ಆಗಿದೆ.

ನಿಯಮಗಳ ಅನುಸರಣೆಯಲ್ಲಿ ಸುಧಾರಣೆ ಮತ್ತು  ತೆರಿಗೆ ವಂಚನೆ ತಗ್ಗಿರುವುದೇ ವರಮಾನ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ.

2023ರ ಆಗಸ್ಟ್‌ನಲ್ಲಿ ಸಂಗ್ರಹ ಆಗಿರುವ ಒಟ್ಟು ತೆರಿಗೆಯಲ್ಲಿ ಕೇಂದ್ರ ಜಿಎಸ್‌ಟಿ ₹28,328 ಕೋಟಿ, ರಾಜ್ಯ ಜಿಎಸ್‌ಟಿ ₹35,794 ಕೋಟಿ, ಸಮಗ್ರ ಜಿಎಸ್‌ಟಿ ₹83,251 ಕೋಟಿ ಹಾಗೂ ಸೆಸ್‌ ₹11,695 ಕೋಟಿ ಒಳಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಸರಕುಗಳ ಆಮದು ಮೂಲಕ ಸಂಗ್ರಹ ಆಗಿರುವ ವರಮಾನವು ಶೇ 3ರಷ್ಟು ಹೆಚ್ಚಾಗಿದೆ. ದೇಶಿ ವಹಿವಾಟಿನ ಮೂಲಕ ಬಂದಿರುವ ವರಮಾನ ಶೇ 14ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.

ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದರೂ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹವು ಸಾಂಕೇತಿಕ ಜಿಡಿಪಿಗಿಂತಲೂ (ನಾಮಿನಲ್‌ ಜಿಡಿಪಿ) ಹೆಚ್ಚಾಗಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಸಂಜಯ್ ಮಹ್ಲೋತ್ರಾ ಹೇಳಿದ್ದಾರೆ.

ಹಬ್ಬದ ಋತು ಬರುತ್ತಿರುವುದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೆಪಿಎಂಜಿ ಸಂಸ್ಥೆಯ ಪರೋಕ್ಷ ತೆರಿಗೆಗಳ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಭಿಷೇಕ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.