ADVERTISEMENT

ಮೇನಲ್ಲಿ ₹1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಸತತ 5ನೇ ಬಾರಿಗೆ ₹1.5 ಲಕ್ಷ ಕೋಟಿ ದಾಟಿದ ವರಮಾನ ಸಂಗ್ರಹ

ಪಿಟಿಐ
ರಾಯಿಟರ್ಸ್
Published 1 ಜೂನ್ 2023, 16:58 IST
Last Updated 1 ಜೂನ್ 2023, 16:58 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಮೇ ತಿಂಗಳಿನಲ್ಲಿ ₹1.57 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಹೇಳಿದೆ.

ಕಳೆದ ವರ್ಷದ ಮೇ ತಿಂಗಳಿನಲ್ಲಿ ₹1.41 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ವರಮಾನ ಸಂಗ್ರಹ ಶೇಕಡ 12ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ₹1.87 ಲಕ್ಷ ಕೋಟಿ ಆಗಿತ್ತು. ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದ ನಂತರ ವರಮಾನ ಸಂಗ್ರಹವು ಸತತ 5ನೇ ಬಾರಿಗೆ ₹1.5 ಲಕ್ಷ ಕೋಟಿಯನ್ನು ದಾಟಿದೆ.

ADVERTISEMENT

2024ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಮೂಲಕ ₹9.56 ಲಕ್ಷ ಕೋಟಿ ವರಮಾನ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಇಟ್ಟುಕೊಂಡಿದೆ.

ಜಿಎಸ್‌ಟಿ ಸಂಗ್ರಹದಲ್ಲಿನ ಏರಿಕೆಯು ಸರ್ಕಾರದ 2023–24ನೇ ಬಜೆಟ್‌ ಅಂದಾಜಿಗೆ ಪೂರಕವಾಗಿ ಇದೆ ಎಂದು ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆಯ ಮುಖ್ಯಸ್ಥ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ತೆರಿಗೆ ಲೆಕ್ಕಪರಿಶೋಧನೆಯನ್ನು ವ್ಯಾಪಕವಾಗಿ ಕೈಗೊಳ್ಳುತ್ತಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ತೆರಿಗೆ ಸಂಗ್ರಹ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಜಿಎಸ್‌ಟಿ ವರಮಾನವು ₹1.55 ಲಕ್ಷ ಕೋಟಿಯಿಂದ ₹1.65 ಲಕ್ಷ ಕೋಟಿಯ ಮಟ್ಟದಲ್ಲಿ ಇರುವ ನಿರೀಕ್ಷೆ ಇದ್ದು, ಹಿಂದಿನ ವರ್ಷದ ಸಂಗ್ರಹಕ್ಕೆ ಹೋಲಿಸಿದರೆ ಶೇ 10–11ರಷ್ಟು ಹೆಚ್ಚಳ ಕಾಣಲಿದೆ. 2023–24ಕ್ಕೆ ನೈಜ ಜಿಡಿಪಿ ಬೆಳವಣಿಗೆಯ ಅಂದಾಜಿನ ಮಟ್ಟದಲ್ಲಿಯೇ ಇರಲಿದೆ ಎಂದು ಐಸಿಆರ್‌ಎನ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.