ಜೈಸಲ್ಮೇರ್‌ನಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಿತು
–ಪಿಟಿಐ ಚಿತ್ರ
ಜೈಸಲ್ಮೇರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ 55ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯು, ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಕುರಿತ ನಿರ್ಧಾರವನ್ನು ಮುಂದೂಡಿದೆ.
ವಿಮಾ ಕಂತಿನ ಮೇಲಿನ ತೆರಿಗೆ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಹೆಚ್ಚಿನ ಚರ್ಚೆ ಹಾಗೂ ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ಮಂಡಳಿ ಹೇಳಿದೆ.
ಮತ್ತೊಂದೆಡೆ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಸಮಿತಿಯು ಗುಂಪು, ವೈಯಕ್ತಿಕ ಹಾಗೂ ಹಿರಿಯ ನಾಗರಿಕರ ಪಾಲಿಸಿಗಳಿಗೆ ಸಂಬಂಧಿಸಿದ ತೆರಿಗೆ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ. ಹಾಗಾಗಿ, ಈ ಕುರಿತ ನಿರ್ಧಾರವನ್ನು ಮುಂದೂಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ ಅವರು, ‘ಸಮಿತಿಯ ಸದಸ್ಯರು ತೆರಿಗೆ ಕಡಿತ ಕುರಿತು ಹೆಚ್ಚಿನ ಚರ್ಚೆ ನಡೆಸಬೇಕಿದೆ ಎಂದು ಪ್ರಸ್ತಾಪಿಸಿದ್ದಾರೆ. ಹಾಗಾಗಿ, ಜನವರಿಯಲ್ಲಿ ಸಭೆ ಕರೆದು ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಜಿಎಸ್‌ಟಿ ದರ ಸರಳೀಕರಣ ಕುರಿತು ರಚಿಸಿದ್ದ ಸಚಿವರ ಸಮಿತಿಯು 148 ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಣೆ ಕುರಿತ ಶಿಫಾರಸು ವರದಿಯನ್ನು ಸಭೆಯ ಮುಂದೆ ಮಂಡಿಸಿಲ್ಲ.
ದರ ಸರಳೀಕರಣ ಕುರಿತು ಸಾಮ್ರಾಟ್ ಚೌಧರಿ ಅಧ್ಯಕ್ಷತೆಯಲ್ಲಿ ಆರು ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಸಭೆಯಲ್ಲಿ ವರದಿ ಮಂಡಿಸಲಿದೆ ಎಂದು ಹೇಳಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ‘ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವರದಿ ಮಂಡಿಸಲಾಗುವುದು’ ಎಂದರು.
ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ್ದ ಸಮಿತಿಯು 148 ವಸ್ತುಗಳ ಮೇಲೆ ಜಿಎಸ್‌ಟಿ ಪರಿಷ್ಕರಣೆಗೆ ಒಮ್ಮತ ಸೂಚಿಸಿತ್ತು. ಬಾಟಲಿಯಲ್ಲಿರುವ ಪಾನೀಯಗಳು, ತಂಬಾಕು ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಈಗಿರುವ ತೆರಿಗೆಯನ್ನು ಶೇ 28ರಿಂದ ಶೇ 35ಕ್ಕೆ ಹೆಚ್ಚಿಸುವ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಿತ್ತು.
ಸದ್ಯ ಸ್ವಿಗ್ಗಿ ಮತ್ತು ಜೊಮಾಟೊದ ಆಹಾರ ವಿತರಣೆ ಮೇಲೆ ಸದ್ಯ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ಕಡಿತಗೊಳಿಸುವ ಸಭೆಯು ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆಯಿದೆ. ಸದ್ಯ ಇದನ್ನೂ ಮುಂದೂಡಿಸಲಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ವಿಮಾನ ಇಂಧನ (ಎಟಿಎಫ್) ತರುವ ಬಗ್ಗೆ ರಾಜ್ಯಗಳು ಒಪ್ಪಲು ಸಿದ್ಧವಿಲ್ಲ. ಕೇಂದ್ರವೊಂದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ
ದೇಶದಲ್ಲಿ ವಿದ್ಯುತ್‌ಚಾಲಿತ ಹೊಸ ಕಾರುಗಳ ಬಳಕೆಗೆ ಉತ್ತೇಜನ ನೀಡಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ. ವಿದ್ಯುತ್‌ಚಾಲಿತ ಹೊಸ ಕಾರುಗಳಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಆದರೆ ಸೆಕೆಂಡ್ ಹ್ಯಾಂಡ್ ಇ.ವಿ ಕಾರನ್ನು ಅದರ ಮಾಲೀಕ ನೇರವಾಗಿ ಮಾರಾಟ ಮಾಡಿದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಯಾವುದಾದರು ಕಂಪನಿಯು ಸೆಕೆಂಡ್ ಹ್ಯಾಂಡ್ ಇ.ವಿ ಕಾರು ಅಥವಾ ಮಾರಾಟಗಾರು ಮರು ಮಾರಾಟಕ್ಕಾಗಿ ಸೆಕೆಂಡ್ ಹ್ಯಾಂಡ್ ಇ.ವಿ ಕಾರನ್ನು ಮಾರ್ಪಡಿಸಿ ಮಾರಾಟ ಮಾಡಿದರೆ ಶೇ 18ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾರು ಖರೀದಿ ವೇಳೆಯಲ್ಲಿದ್ದ ದರ ಮತ್ತು ಮಾರಾಟ ದರದ ನಡುವಿನ ಮೌಲ್ಯ ಆಧರಿಸಿ ತೆರಿಗೆ ವಿಧಿಸಲಾಗುತ್ತಿದೆ. ಸೆಕೆಂಡ್ ಹ್ಯಾಂಡ್ ಇ.ವಿ ಕಾರುಗಳ ಮಾರಾಟ ಮೇಲೆ ಏಕಾಏಕಿ ತೆರಿಗೆ ಏರಿಕೆ ಮಾಡಿಲ್ಲ. ಆರಂಭದಲ್ಲಿ ಶೇ 5ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿತ್ತು. ಸುದೀರ್ಘ ಚರ್ಚೆ ಬಳಿಕ ಇದನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರಿ ಶಾಲುಗಳ ಮೇಲೆ ಜಿಎಸ್‌ಟಿ ಹೆಚ್ಚಳಕ್ಕೆ ಪ್ರಸ್ತಾಪಿಸಲಾಗಿದೆ. ಇದರಿಂದ ಕಾಶ್ಮೀರದ ಕರಕುಶಲ ಕಲೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಪ್ರವಾಸೋದ್ಯಮವನ್ನಷ್ಟೇ ನಂಬಿಕೊಂಡು ಜೀವನ ನಿರ್ವಹಣೆ ಮಾಡಲಿ ಎಂದು ಕೇಂದ್ರ ಸರ್ಕಾರ ಇಚ್ಛಿಸಿದಂತಿದೆ. ಈ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರಿ ಶಾಲು ಇಲ್ಲಿನ ಜನಜೀವನದ ಭಾಗವಷ್ಟೇ ಆಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಹೆಗ್ಗುರುತಾಗಿದೆ. ಇದರ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಶೇ 28ಕ್ಕೆ ಹೆಚ್ಚಿಸಿದರೆ ಇಲ್ಲಿನ ಕರಕುಶಲತೆಯು ನಾಶವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.