ಜಿಎಸ್‌ಟಿ
ನವದೆಹಲಿ: ಜಿಎಸ್‌ಟಿ ದರ ಸರಳೀಕರಣ ಮತ್ತು ಪರಿಹಾರ ಸೆಸ್ ಕುರಿತು ಚರ್ಚಿಸಲು ಶೀಘ್ರವೇ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ದರ ಸರಳೀಕರಣ, ಸ್ಲ್ಯಾಬ್‌ಗಳ ಪರಿಷ್ಕರಣೆ ಮತ್ತು ಪರಿಹಾರ ಸೆಸ್‌ಗೆ ಸಂಬಂಧಿಸಿದಂತೆ ಸಚಿವರ ಸಮಿತಿಗಳನ್ನು ರಚಿಸಲಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ ಸಭೆ ನಡೆದಿತ್ತು. ಆದರೆ, 148 ಸರಕುಗಳ ಮೇಲಿನ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ವರದಿಯನ್ನು ಈ ಸಭೆಯಲ್ಲಿ ಮಂಡಿಸಿಲ್ಲ.
ಅಲ್ಲದೆ, ಸಭೆಯು ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಕುರಿತ ನಿರ್ಧಾರವನ್ನು ಮುಂದೂಡಿತ್ತು. ಈ ಕುರಿತು ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಿವೆ.
ಪರಿಹಾರ ಸೆಸ್ ಅವಧಿಯು 2026ರ ಮಾರ್ಚ್‌ಗೆ ಅಂತ್ಯಗೊಳ್ಳಲಿದೆ. ಈ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ಸಚಿವರ ಸಮಿತಿ ರಚಿಸಲಾಗಿದೆ.
ಭವಿಷ್ಯದಲ್ಲಿ ಈ ಸೆಸ್ ಅನ್ನು ಯಾವ ರೂಪದಲ್ಲಿ ಸಂಗ್ರಹಿಸಬೇಕು. ಜೊತೆಗೆ, ಇದರಿಂದ ಬರುವ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹೇಗೆ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಮಿತಿಯು ಚರ್ಚಿಸಿ ಅಂತಿಮ ವರದಿ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.