ADVERTISEMENT

ಆರೋಗ್ಯ, ಜೀವ ವಿಮೆಗೆ ಜಿಎಸ್‌ಟಿ ವಿನಾಯಿತಿ?

ಪಿಟಿಐ
Published 20 ಆಗಸ್ಟ್ 2025, 15:39 IST
Last Updated 20 ಆಗಸ್ಟ್ 2025, 15:39 IST
Wooden letters GST and money coin stack on red table background, financial concept
Wooden letters GST and money coin stack on red table background, financial concept   

ನವದೆಹಲಿ: ವ್ಯಕ್ತಿಗಳು ಖರೀದಿಸುವ ಜೀವ ವಿಮೆ ಹಾಗೂ ಆರೋಗ್ಯ ವಿಮೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ ಎಂದು ಜಿಎಸ್‌ಟಿ ಮಂಡಳಿಯ ವಿಮೆ ಕುರಿತ ಸಚಿವರ ಗುಂಪಿನ ಸಂಚಾಲಕ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಈಗ ಆರೋಗ್ಯ ವಿಮೆ ಹಾಗೂ ಜೀವ ವಿಮೆಗೆ ಜಿಎಸ್‌ಟಿ ಅಡಿಯಲ್ಲಿ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‌ಟಿ ಮಂಡಳಿಯ ವಿಮೆ ಕುರಿತ ಸಚಿವರ ಗುಂಪು ಬುಧವಾರ ಸಭೆ ನಡೆಸಿತು.

ಕೇಂದ್ರದ ಪ್ರಸ್ತಾವವನ್ನು ಬಹುತೇಕ ಎಲ್ಲ ರಾಜ್ಯಗಳು ಬೆಂಬಲಿಸಿವೆ. ಆದರೆ, ಜಿಎಸ್‌ಟಿ ಅಡಿಯಲ್ಲಿ ನೀಡುವ ವಿನಾಯಿತಿಯು ಗ್ರಾಹಕರಿಗೆ ನೇರವಾಗಿ ವರ್ಗಾವಣೆ ಆಗುವಂತಹ ಮಾರ್ಗವೊಂದನ್ನು ರೂಪಿಸುವಂತೆ ರಾಜ್ಯಗಳು ಹೇಳಿವೆ ಎಂದು ಗುಂಪಿನ ಸದಸ್ಯ ಹಾಗೂ ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ತಿಳಿಸಿದ್ದಾರೆ.

ADVERTISEMENT

‘ಜಿಎಸ್‌ಟಿ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಲಭಿಸಬೇಕೇ ವಿನಾ ಕಂಪನಿಗಳಿಗೆ ಅಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಇದಕ್ಕಾಗಿ ಮಾರ್ಗೋಪಾಯವೊಂದನ್ನು ಕಂಡುಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಜೀವ ವಿಮೆ ಹಾಗೂ ಆರೋಗ್ಯ ವಿಮೆ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಅಥವಾ ಅವುಗಳಿಗೆ ತೆರಿಗೆಯಿಂದ ವಿನಾಯಿತಿ ಕೊಡಬೇಕು ಎಂದು ರಾಜ್ಯಗಳು ಬಯಸಿದ್ದವು. ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗೋಪಾಯವನ್ನು ಜಿಎಸ್‌ಟಿ ಮಂಡಳಿಯು ಕಂಡುಕೊಳ್ಳಲಿದೆ’ ಎಂದು ವಿಕ್ರಮಾರ್ಕ ತಿಳಿಸಿದ್ದಾರೆ.

ವ್ಯಕ್ತಿಗಳು ಖರೀದಿಸುವ ಈ ವಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಿದರೆ ವಾರ್ಷಿಕ ವರಮಾನ ನಷ್ಟ ₹9,700 ಕೋಟಿ ಆಗಬಹುದು ಎಂಬ ಅಂದಾಜು ಇದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪ್ರಸ್ತಾವವು ಸ್ಪಷ್ಟವಾಗಿದೆ. ವ್ಯಕ್ತಿಗಳು ಖರೀದಿಸುವ ವಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ಇರಬೇಕು ಎಂದು ಅದು ಹೇಳುತ್ತದೆ. ಇದರ ಬಗ್ಗೆ ಚರ್ಚೆ ಆಗಿದೆ. ಸಚಿವರ ಗುಂಪು ತನ್ನ ವರದಿಯನ್ನು ಜಿಎಸ್‌ಟಿ ಮಂಡಳಿಗೆ ಸಲ್ಲಿಸಲಿದೆ. ಅದರಲ್ಲಿ ಕೆಲವು ರಾಜ್ಯಗಳ ಹಣಕಾಸು ಸಚಿವರು ವ್ಯಕ್ತಪಡಿಸಿರುವ ಕಳವಳಗಳೂ ದಾಖಲಾಗಲಿವೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಕೂಡ ಆಗಿರುವ ಚೌಧರಿ ತಿಳಿಸಿದ್ದಾರೆ.

ತೆರಿಗೆ ಪ್ರಮಾಣ ಕಡಿಮೆ ಮಾಡಲು ಎಲ್ಲ ಸದಸ್ಯರು ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ಹಾಗೂ ಜೀವ ವಿಮೆಗೆ ಸಂಬಂಧಿಸಿದ ಸಚಿವರ ಗುಂಪನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿದೆ. ಈ ವಿಮೆಗಳಿಗೆ ಎಷ್ಟು ತೆರಿಗೆ ನಿಗದಿ ಮಾಡಬೇಕು ಎಂಬ ಬಗ್ಗೆ ಈ ಗುಂಪು ಸಲಹೆ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.