ADVERTISEMENT

ಆಹಾರ ಧಾನ್ಯಗಳಿಗೆ ಜಿಎಸ್‌ಟಿ ವಿನಾಯ್ತಿ: ಆಗ್ರಹ

ರಾಜ್ಯ ಅಕ್ಕಿ ಗಿರಣಿದಾರರ ಸಂಘದಿಂದ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:46 IST
Last Updated 15 ಜುಲೈ 2022, 18:46 IST
ಆಹಾರ ಪದಾರ್ಥಗಳ ಮೇಲೆ ಶೇಕಡಾ 5ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುವ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಸದಸ್ಯರು ಶುಕ್ರವಾರ ಪ್ರೆಸ್‌ ಕ್ಲಬ್‌ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು
ಆಹಾರ ಪದಾರ್ಥಗಳ ಮೇಲೆ ಶೇಕಡಾ 5ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುವ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಸದಸ್ಯರು ಶುಕ್ರವಾರ ಪ್ರೆಸ್‌ ಕ್ಲಬ್‌ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಆಹಾರ ಧಾನ್ಯ, ಬೆಳೆ ಕಾಳು ಸೇರಿದಂತೆ ವಿವಿಧ ಹಿಟ್ಟಿನ ಪದಾರ್ಥಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸುವ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಆಗ್ರಹಿಸಿದೆ.

‘ಈಗಾಗಲೇ ದಿನಬಳಕೆ ವಸ್ತುಗಳು ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಜುಲೈ 18ರಿಂದ ಜಾರಿಯಾಗುವ ಜಿಎಸ್‌ಟಿ ಕೌನ್ಸಿಲ್ ಆದೇಶದ ಪ್ರಕಾರ ಶೇಕಡಾ 5ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುತ್ತಿರುವುದು ಅಸಮಂಜಸ ನಡೆ.ಅಕ್ಕಿ ಅಗತ್ಯ ವಸ್ತುವಾಗಿದ್ದು, ಇದುವರೆಗೂ ತೆರಿಗೆಗೆ ಒಳ‍ಪಟ್ಟಿರಲಿಲ್ಲ. ಈಗ ತೆರಿಗೆ ವ್ಯಾಪ್ತಿಯೊಳಗೆ ಬರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಲಿದೆ’ ಎಂದು ಸಂಘದ ಕಾರ್ಯದರ್ಶಿ ಎಸ್.ಶಿವಕುಮಾರ್ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ(ಎಫ್‌ಎಸ್‌ಎಸ್ಐ) ಮಾನದಂಡಗಳ ಪ್ರಕಾರ ಗುಣಮಟ್ಟದ ಅಕ್ಕಿಯನ್ನು ಮಾರುಕಟ್ಟೆಗೆ ಪೂರೈಕೆ ಮಾಡಬೇಕಾಗಿದೆ. ಅಕ್ಕಿಯ ಮೇಲೆ ತೆರಿಗೆ ವಿಧಿಸಿದರೆ ರೈತರಿಂದ ಖರೀದಿಸುವ ಕಚ್ಚಾ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರಿ, ಭತ್ತಕ್ಕೆ ಕಡಿಮೆ ಬೆಲೆ ನಿಗದಿ ಮಾಡುವ ಪರಿಸ್ಥಿತಿ ಎದುರಾಗಬಹುದು’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿಯವರ ರೈತರ ಆದಾಯ ದ್ವಿಗುಣಗೊಳಿಸುವ ಆಶಯಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ. ಈಗಾಗಲೇ ರೈತರು ಪರ್ಯಾಯ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ದೇಶದ ಆಹಾರ ಧಾನ್ಯ ಉತ್ಪಾದನೆ ಕುಂಠಿತಗೊಂಡು, ರಾಷ್ಟ್ರದ ಆಹಾರ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ಎಚ್ಚರಿಸಿದರು.

‘ಎಲ್ಲಾ ಆಹಾರ ಧಾನ್ಯಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದರಿಂದ ಪ್ರತಿಯೊಬ್ಬರ ಮನೆಯ ಸರಾಸರಿ ಖರ್ಚು ತಿಂಗಳಿಗೆ ₹500ರಷ್ಟು ಹೆಚ್ಚಾಗುತ್ತದೆ. ಹೋಟೆಲ್‌ನವರು ಈಗಾಗಲೇ ಶೇಕಡಾ 5ರಷ್ಟು ಜಿಎಸ್‌ಟಿ ತೆರಿಗೆ ಭರಿಸುತ್ತಿದ್ದಾರೆ’ ಎಂದು ಸದಸ್ಯ ಪ್ರಸನ್ನಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.