ADVERTISEMENT

ಮಾರ್ಚ್‌ ತಿಂಗಳ ಜಿಎಸ್‌ಟಿ ಸಾರ್ವಕಾಲಿಕ ಗರಿಷ್ಠ: ₹ 1.23 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 1 ಏಪ್ರಿಲ್ 2021, 15:23 IST
Last Updated 1 ಏಪ್ರಿಲ್ 2021, 15:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮೂಲಕ ಆಗಿರುವ ತೆರಿಗೆ ಸಂಗ್ರಹವು ಸತತ ಆರನೇ ತಿಂಗಳಿನಲ್ಲಿಯೂ ₹ 1 ಲಕ್ಷ ಕೋಟಿಯ ಗಡಿ ದಾಟಿದೆ. ಮಾರ್ಚ್ ತಿಂಗಳಿನಲ್ಲಿ ದಾಖಲೆಯ ₹ 1.23 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2020ರ ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹದ ಮೊತ್ತ ₹ 97,590 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇಕಡ 27ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ.

ದೇಶದ ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿದೆ ಎನ್ನುವುದಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಆಗುತ್ತಿರುವ ಏರಿಕೆಯು ಸ್ಪಷ್ಟ ಸೂಚನೆ ಎಂದು ಸಚಿವಾಲಯ ಹೇಳಿದೆ.

ADVERTISEMENT

2021ರ ಮಾರ್ಚ್‌ನಲ್ಲಿ ಸಂಗ್ರಹವಾಗಿರುವ ಒಟ್ಟಾರೆ ತೆರಿಗೆಯಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 22,973 ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 29,329 ಕೋಟಿ ಹಾಗೂ ಸಮಗ್ರ ಜಿಎಸ್‌ಟಿ ಪಾಲು ₹ 62,842 ಕೋಟಿ. ಸೆಸ್‌ ಮೂಲಕ ₹ 8,757 ಕೋಟಿ ಸಂಗ್ರಹವಾಗಿದೆ.

ಜೂನ್‌ ಮತ್ತು ಸೆಪ್ಟೆಂಬರ್‌ ತ್ರೈಮಾಸಿಕಗಳಲ್ಲಿ ಜಿಎಸ್‌ಟಿ ಸಂಗ್ರಹವು ಕ್ರಮವಾಗಿ ಶೇ 41 ಮತ್ತು ಶೇ 8ರಷ್ಟು ಇಳಿಕೆ ಆಗಿತ್ತು. ಆರ್ಥಿಕತೆಯು ಚೇತರಿಕೆ ಕಾಣಲು ಆರಂಭಿಸಿದ ಬಳಿಕ ಡಿಸೆಂಬರ್‌ ಮತ್ತು ಮಾರ್ಚ್ ತ್ರೈಮಾಸಿಕಗಳಲ್ಲಿ ತೆರಿಗೆ ಸಂಗ್ರಹವು ಕ್ರಮವಾಗಿ ಶೇ 8 ಮತ್ತು ಶೇ 14ರಷ್ಟು ಏರಿಕೆ ಕಂಡಿದೆ.

ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ 2020ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಕನಿಷ್ಠ ಮಟ್ಟವಾದ ₹ 32,172 ಕೋಟಿಗೆ ಕುಸಿತ ಕಂಡಿತ್ತು.

ತೆರಿಗೆ ಸಂಗ್ರಹದ ವಿವರ (ಲಕ್ಷ ಕೋಟಿಗಳಲ್ಲಿ)

ಅಕ್ಟೋಬರ್‌: ₹1.05

ನವೆಂಬರ್‌: ₹1.04

ಡಿಸೆಂಬರ್: ₹1.15

2021ಜನವರಿ: ₹1.19

ಫೆಬ್ರುವರಿ: ₹1.13

ಮಾರ್ಚ್‌: ₹1.23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.