ADVERTISEMENT

ಜಿಎಸ್‌ಟಿಆರ್‌–1 ನಲ್ಲಿ ವ್ಯತ್ಯಾಸ: ತಕ್ಷಣವೇ ನೋಂದಣಿ ಅಮಾನತು

ಪಿಟಿಐ
Published 14 ಫೆಬ್ರುವರಿ 2021, 14:47 IST
Last Updated 14 ಫೆಬ್ರುವರಿ 2021, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರಕುಗಳ ಪೂರೈಕೆದಾರ ನೀಡಿದ ಜಿಎಸ್‌ಟಿ ವಿವರ ಮತ್ತು ಖರೀದಿದಾರ ವರ್ತಕ ನೀಡಿದ ಜಿಎಸ್‌ಟಿ ವಿವರಗಳ ಮಧ್ಯೆ ಗಮನಾರ್ಹ ವ್ಯತ್ಯಾಸಗಳಿದ್ದರೆ ಅಂಥವರ (ಖರೀದಿದಾರ) ನೋಂದಣಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಜಿಎಸ್‌ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿ (ಎಸ್‌ಒಪಿ) ಹೊರಡಿಸಿದೆ. ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.

ಎಸ್‌ಒಪಿ ಪ್ರಕಾರ, ನೋಂದಣಿಯನ್ನು ಅಮಾನತು ಮಾಡಿರುವ ಸೂಚನೆ, ಜಿಎಸ್‌ಟಿ ಆರ್‌ಇಜಿ–31 ಫಾರಂನಲ್ಲಿ ನೋಂದಣಿ ರದ್ದುಗೊಳಿಸುವ ಕುರಿತು ನೋಟಿಸ್‌, ನೋಂದಣಿ ಅಮಾನುಗೊಳಿಸಲು ಕಾರಣಗಳನ್ನು ನಿರ್ದಿಷ್ಟ ತೆರಿಗೆದಾರರ ಇ–ಮೇಲ್‌ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ADVERTISEMENT

ಜಾಲತಾಣದಲ್ಲಿ ಆರ್‌ಇಜಿ–31 ಅರ್ಜಿ ಲಭ್ಯವಾಗುವಂತೆ ಮಾಡುವವರೆಗೂ ತೆರಿಗೆದಾರರು ತಮ್ಮ ನೋಂದಣಿ ರದ್ದುಪಡಿಸಿರುವ ನೋಟಿಸ್‌ ಅಥವಾ ಸೂಚನೆಯನ್ನು ಅವರ ಡ್ಯಾಷ್‌ಬೋರ್ಡ್‌ನಲ್ಲಿ ಜಿಎಸ್‌ಟಿ ಆರ್‌ಇಜಿ–17 ಅರ್ಜಿಯಲ್ಲಿ ನೋಡಬಹುದಾಗಿದೆ.

ನೋಂದಣಿ ಅಮಾನತುಗೊಂಡ ನೋಟಿಸ್‌ ಅಥವಾ ಮಾಹಿತಿ ದೊರೆತ 30 ದಿನಗಳೊಳಗೆ ತೆರಿಗೆದಾರರು ಸ್ಥಳೀಯ ತೆರಿಗೆ ಅಧಿಕಾರಿಗಳಿಗೆ ಜಾತಲಾಣದ ಮೂಲಕ ಆ ಬಗ್ಗೆ ಉತ್ತರ ನೀಡಬೇಕಾಗುತ್ತದೆ. ತಮ್ಮ ನೋಂದಣಿಯನ್ನು ಏಕೆ ರದ್ದುಪಡಿಸಬಾರದು ಎನ್ನುವುದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ.

ರಿಟರ್ನ್ಸ್ ಸಲ್ಲಿಸದೇ ಇರುವ ಕಾರಣಕ್ಕಾಗಿ ನೊಂದಣಿ ಅಮಾನತುಗೊಳಿಸುವ ಮತ್ತು ನೋಂದಣಿ ರದ್ದತಿಗೆ ನೋಟಿಸ್ ನೀಡಿದ್ದರೆ, ನಿರ್ದಿಷ್ಟ ತೆರಿಗೆದಾರ ಬಾಕಿ ಇರುವ ರಿಟರ್ನ್ಸ್‌ ಸಲ್ಲಿಸಿ, ಪ್ರತಿಕ್ರಿಯೆ ನೀಡಬಹುದು ಎಂದು ಎಸ್‌ಒಪಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.