ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ವಿಲೀನ

ದೇಶದ ಕಾರ್ಪೊರೇಟ್‌ ಇತಿಹಾಸದಲ್ಲಿನ ಅತಿದೊಡ್ಡ ವಿಲೀನ ಪ್ರಕ್ರಿಯೆ

ಪಿಟಿಐ
Published 4 ಏಪ್ರಿಲ್ 2022, 14:33 IST
Last Updated 4 ಏಪ್ರಿಲ್ 2022, 14:33 IST
ಎಚ್‌ಡಿಎಫ್‌ಸಿ
ಎಚ್‌ಡಿಎಫ್‌ಸಿ   

ನವದೆಹಲಿ: ದೇಶದ ಅತಿದೊಡ್ಡ ಗೃಹ ಹಣಕಾಸು ಕಂಪನಿ ಎಚ್‌ಡಿಎಫ್‌ಸಿ, ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನ ಆಗಲಿದೆ. ಈ ವಿಲೀನವು ದೇಶದಲ್ಲಿ ದೈತ್ಯ ಬ್ಯಾಂಕಿಂಗ್‌ ಕಂಪನಿಯೊಂದನ್ನು ಹುಟ್ಟುಹಾಕಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವು ದೇಶದ ಕಾರ್ಪೊರೇಟ್ ಇತಿಹಾಸದಲ್ಲಿನ ಅತಿದೊಡ್ಡ ವಿಲೀನ ಪ್ರಕ್ರಿಯೆ ಆಗಲಿದೆ.

ವಿಲೀನವು ಪೂರ್ಣಗೊಂಡ ನಂತರದಲ್ಲಿ ಎಚ್‌ಡಿಎಫ್‌ಸಿಯ ಷೇರು ಹೊಂದಿರುವವರಿಗೆ ಪ್ರತಿ 25 ಷೇರುಗಳಿಗೆ ಪ್ರತಿಯಾಗಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳು ದೊರೆಯಲಿವೆ. ‘ಇದು ಎರಡು ಸಮಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆ’ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಧ್ಯಕ್ಷ ದೀಪಕ್ ಪಾರೇಖ್ ಹೇಳಿದ್ದಾರೆ.

‘ರೇರಾ ಕಾಯ್ದೆಯ ಅನುಷ್ಠಾನ, ಗೃಹ ನಿರ್ಮಾಣ ವಲಯಕ್ಕೆ ಮೂಲಸೌಕರ್ಯ ವಲಯ ಎಂಬ ಮಾನ್ಯತೆ ನೀಡಿರುವುದು ಮತ್ತು ಎಲ್ಲರಿಗೂ ಕೈಗೆಟಕುವ ದರದಲ್ಲಿ ಮನೆ ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕಾರಣದಿಂದಾಗಿ ಗೃಹ ಸಾಲ ವಹಿವಾಟುಗಳು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲಿವೆ ಎಂಬುದು ನಮ್ಮ ನಂಬಿಕೆ’ ಎಂದದೂ ಪಾರೇಖ್ ಹೇಳಿದ್ದಾರೆ.

ADVERTISEMENT

‘ಈ ವಿಲೀನವು ಎಚ್‌ಡಿಎಫ್‌ಸಿ ಬ್ಯಾಂಕ್‌ಅನ್ನು ಅಂತರರಾಷ್ಟ್ರೀಯ ಮಾನದಂಡಗಳ ದೃಷ್ಟಿಯಿಂದಲೂ ದೊಡ್ಡ ಬ್ಯಾಂಕನ್ನಾಗಿ ಪರಿವರ್ತಿಸಲಿದೆ’ ಎಂದು ಎಚ್‌ಡಿಎಫ್‌ಸಿ ಸಿಇಒ ಕೆಕಿ ಮಿಸ್ತ್ರಿ ಹೇಳಿದ್ದಾರೆ. ಎರಡು ಕಂಪನಿಗಳ ವಿಲೀನವು ಮುಂದಿನ ಹಣಕಾಸು ವರ್ಷದ ಎರಡನೆಯ ಅಥವಾ ಮೂರನೆಯ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಿಲೀನದಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ತನ್ನ ಗೃಹ ಸಾಲ ವಹಿವಾಟುಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು, ಗ್ರಾಹಕರ ನೆಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ. ವಿಲೀನಕ್ಕೆ ಆರ್‌ಬಿಐ ಅನುಮೋದನೆ ಸಿಗಬೇಕಿದೆ.

ಎಚ್‌ಡಿಎಫ್‌ಸಿ ಲಿಮಿಟೆಡ್ ಕಂಪನಿಯು ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಇರುವವರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಗೃಹ ಸಾಲ ನೀಡುವಲ್ಲಿ ಗಣನೀಯ ಪಾತ್ರ ವಹಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ದೇಶದ ಮೂರು ಸಾವಿರಕ್ಕೂ ಹೆಚ್ಚಿನ ನಗರ, ಪಟ್ಟಣಗಳಲ್ಲಿ ಒಟ್ಟು 6,342 ಶಾಖೆಗಳನ್ನು ಹೊಂದಿದೆ.

=

6.23 ಲಕ್ಷ ಕೋಟಿ

ಎಚ್‌ಡಿಎಫ್‌ಸಿ ಆಸ್ತಿ ಮೌಲ್ಯ

19.38 ಲಕ್ಷ ಕೋಟಿ

ಎಚ್‌ಡಿಎಫ್‌ಸಿ ಬ್ಯಾಂಕ್ ಆಸ್ತಿ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.