ADVERTISEMENT

ಎರಡಂಕಿ ಮಟ್ಟಕ್ಕೆ ಏರಲಿದೆ ಹಣದುಬ್ಬರ: ಆರ್‌ಬಿಐ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ

ಮಾರ್ಚ್‌ನಲ್ಲಿ ಆರ್‌ಬಿಐ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:31 IST
Last Updated 9 ಏಪ್ರಿಲ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ (2022–23) ಚಿಲ್ಲರೆ ಹಣದುಬ್ಬರವು ಶೇ 6ಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತನ್ನ ಹಣಕಾಸು ನೀತಿ ಸಭೆಯಲ್ಲಿ ಅಂದಾಜು ಮಾಡಿದೆ. ಆದರೆ, ಮುಂದಿನ ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ಚಿಲ್ಲರೆ ಹಣದುಬ್ಬರವು ಎರಡಂಕಿ ಮಟ್ಟದಲ್ಲಿ ಇರಲಿದೆ ಎನ್ನುವ ಅಭಿಪ್ರಾಯವು ಕಳೆದ ತಿಂಗಳು ಆರ್‌ಬಿಐ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಬೆಂಗಳೂರನ್ನೂ ಒಳಗೊಂಡು ಪ್ರಮುಖ 19 ನಗರಗಳಲ್ಲಿ ಮಾರ್ಚ್‌ 2ರಿಂದ 11ರವರೆಗೆ 6,033 ಕುಟುಂಬಗಳ ಅಭಿಪ್ರಾಯವನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಈ ವೇಳೆ ಹಣದುಬ್ಬರವು ಎರಡಂಕಿ ಮಟ್ಟದಲ್ಲಿ ಏರಿಕೆಯ ಆಗುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಸದ್ಯ ಚಿಲ್ಲರೆ ಹಣದುಬ್ಬರ ದರವು ಶೇ 9.7ರಷ್ಟು ಇರಲಿದೆ. ಆದರೆ ಮುಂದಿನ ಮೂರು ತಿಂಗಳಿನಲ್ಲಿ ಶೇ 10.7 ಮತ್ತು ಒಂದು ವರ್ಷದ ಅವಧಿಗೆ ಹಣದುಬ್ಬರ ದರವು ಶೇ 10.8ರಷ್ಟು ಇರಲಿದೆ ಎಂದು ಅಂದಾಜುಮಾಡಲಾಗಿದೆ.

ADVERTISEMENT

ಹಿಂದಿನ ಸಮೀಕ್ಷೆಗೆ ಹೋಲಿಸಿದರೆ, ಮೂರು ತಿಂಗಳು ಮತ್ತು ಒಂದು ವರ್ಷದ ಅವಧಿಗೆ ಹಣದುಬ್ಬರದ ನಿರೀಕ್ಷೆಗಳಲ್ಲಿ ಅನಿಶ್ಚಿತತೆಯು ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಜನವರಿಯಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಮೂರು ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ 10.6ರಷ್ಟು ಮತ್ತು ಒಂದು ವರ್ಷದಲ್ಲಿ ಶೇ 10.7ರಷ್ಟು ಇರುವ ನಿರೀಕ್ಷೆ ಮಾಡಲಾಗಿತ್ತು.

2022–23ನೇ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರವು ಶೇ 5.7ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಆದರೆ, ಕಚ್ಚಾ ತೈಲ ದರವು ಬ್ಯಾರಲ್‌ಗೆ 100 ಡಾಲರ್‌ಗಳ ಮಟ್ಟದಲ್ಲಿಯೇ ಮುಂದುವರಿದಲ್ಲಿ ಮಾತ್ರವೇ ಈ ಅಂದಾಜು ಸಮಂಜಸ ಆಗಿರಲಿದೆ ಎಂದೂ ಹೇಳಿದೆ.

ಮೂರು ತಿಂಗಳ ನಿರೀಕ್ಷೆಯು ಆಹಾರ ಮತ್ತು ಆಹಾರೇತರ ಉತ್ಪನ್ನಗಳಿಗೆ ಸಂಬಂಧಿಸಿದ್ದಾಗಿದೆ. ಒಂದು ವರ್ಷದ ನಿರೀಕ್ಷೆಯು ಆಹಾರೇತರ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.