ನವದೆಹಲಿ: ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಮನೆಗಳ ಮಾರಾಟವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 47ರಷ್ಟು ಏರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಪ್ರಾಪ್‌ಟೈಗರ್ ಸೋಮವಾರ ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಮೂರು ನಗರಗಳಲ್ಲಿ 26,284 ಮನೆಗಳು ಮಾರಾವಾಗಿದ್ದವು. ಈ ಬಾರಿ 38,644 ಮನೆಗಳು ಮಾರಾಟವಾಗಿವೆ ಎಂದು ತಿಳಿಸಿದೆ.
ಹೈದರಾಬಾದ್‌ನಲ್ಲಿ ಮನೆಗಳ ಮಾರಾಟ ಶೇ 53ರಷ್ಟು ಹೆಚ್ಚಳವಾಗಿದ್ದು, 17,658 ಮನೆಗಳು ಮಾರಾಟವಾಗಿವೆ. ಬೆಂಗಳೂರಿನಲ್ಲಿ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 11,160 ಮನೆಗಳು ಮಾರಾಟವಾಗಿದ್ದವು. ಈ ಬಾರಿ 13,124 ಮನೆಗಳು ಮಾರಾಟವಾಗಿದ್ದು, ಶೇ 18ರಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ ಮನೆಗಳ ಮಾರಾಟ ದುಪ್ಪಟ್ಟಾಗಿದ್ದು, 7,862 ಮನೆಗಳ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 3,560 ಮನೆಗಳು ಮಾರಾಟವಾಗಿವೆ.
ಮುಂಬೈ, ಪುಣೆ, ದೆಹಲಿ–ಎನ್‌ಸಿಆರ್‌ನಲ್ಲಿ ಮನೆಗಳಿಗೆ ಬೇಡಿಕೆ ಇಳಿಕೆಯಾಗಿದೆ. ದೇಶದ ಪ್ರಮುಖ ಎಂಟು ಮಾರುಕಟ್ಟೆಗಳಲ್ಲಿ ಹಿಂದಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 96,544 ಮನೆಗಳು ಮಾರಾಟವಾಗಿದ್ದವು. ಈ ಬಾರಿ 95,547 ಮಾರಾಟವಾಗಿದ್ದು, ಒಟ್ಟಾರೆ ಮಾರಾಟವು ಶೇ 1ರಷ್ಟು ಇಳಿಕೆಯಾಗಿದೆ.
ಮುಂಬೈ ಮಹಾನಗರ ಪ್ರದೇಶದಲ್ಲಿ ಮನೆಗಳ ಮಾರಾಟದಲ್ಲಿ ಶೇ 22ರಷ್ಟು ಇಳಿಕೆಯಾಗಿ, 23,334 ಮನೆ ಮಾರಾಟವಾಗಿವೆ. ಪುಣೆಯಲ್ಲಿ 12,990, ದೆಹಲಿ–ಎನ್‌ಸಿಆರ್‌ನಲ್ಲಿ 7,961 ಮತ್ತು ಅಹಮದಾಬಾದ್‌ನಲ್ಲಿ 8,889 ಮನೆ ಮಾರಾಟವಾಗಿವೆ. ಕೋಲ್ಕತ್ತದಲ್ಲಿ ಮನೆಗಳ ಮಾರಾಟದಲ್ಲಿ ಶೇ 33ರಷ್ಟು ಹೆಚ್ಚಳವಾಗಿದ್ದು, 3,729 ಮನೆಗಳು ಮಾರಾಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.