ADVERTISEMENT

ಮಳೆ ಲೆಕ್ಕಾಚಾರದಲ್ಲಿ ಲಾಭ–ನಷ್ಟದ ವ್ಯಾಪಾರ

ಪೇಟೆ ನೋಟ

ಎಂ.ಚಂದ್ರಪ್ಪ
Published 2 ಜುಲೈ 2019, 20:00 IST
Last Updated 2 ಜುಲೈ 2019, 20:00 IST
ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರದ ನೋಟ
ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರದ ನೋಟ   

ಸದಾ ಜನಜಾತ್ರೆಯಂತಿರುತ್ತಿದ್ದ ಹುಬ್ಬಳ್ಳಿ ಎಪಿಎಂಸಿ ತರಕಾರಿ ಮಾರುಕಟ್ಟೆಯು ಕಳೆದ ಮೂರ್ನಾಲ್ಕು ದಿನದಲ್ಲಿ ಗ್ರಾಹಕರ ಬರುವಿಕೆಗಾಗಿ ಎದುರು ನೋಡುತ್ತಿತ್ತು. ಶನಿವಾರ ಹಾಗೂ ಭಾನುವಾರ ಸುರಿದ ಮಳೆಗೆ ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಲಿಲ್ಲ. ಇದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದರು. ಮಾರಾಟವಾಗದೇ ಚೀಲಗಳಲ್ಲೇ ಉಳಿದು, ಕೊಳೆಯಲಾರಂಭಿಸಿದ ತರಕಾರಿಯನ್ನು ಕಸಕ್ಕೆ ಸುರಿಯಬೇಕಾಯಿತು.

‘ಮಳೆಯಿಂದಾಗಿ ಗ್ರಾಹಕರಿಲ್ಲದೇ ವ್ಯಾಪಾರ ಕುಸಿದಿದೆ. ಮಳೆಗೆ ತರಕಾರಿ ಹಾಳಾಗಿದ್ದು, ಕಸಕ್ಕೆಸುರಿದೆವು’ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು. ಮಂಗಳವಾರ ಮಾರುಕಟ್ಟೆ ಪ್ರದೇಶದಲ್ಲಿ ಹಾಳಾದ ತರಕಾರಿಗಳನ್ನು ಬಿಡಾಡಿ ದನಗಳಿಗೆ ಹಾಕಿದ್ದ ದೃಶ್ಯ ಕಂಡು ಬಂತು.

ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳ ಪರಿಸ್ಥಿತಿ ಈ ರೀತಿಯಾದರೆ, ವಾರದ ಸಂತೆಗಳಲ್ಲಿನ ವ್ಯಾಪಾರಿಗಳ ಸ್ಥಿತಿ ಭಿನ್ನ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ದುಪ್ಪಟ್ಟಾದರೂ ಮಳೆ ಅದಕ್ಕೆ ಆಸ್ಪದ ನೀಡಲಿಲ್ಲ. ವಿದ್ಯಾನಗರದ ಭಾನುವಾರ ಸಂತೆಗೆ ಮಳೆ ನೀರು ನುಗ್ಗಿ, ವ್ಯಾಪಾರ ಅಸ್ತವ್ಯಸ್ತವಾಯಿತು. ಶಾಲಾ ಮೈದಾನ ತಗ್ಗಿನಲ್ಲಿ ನೀರು ನಿಂತ ಪರಿಣಾಮ ಬಹುತೇಕ ವ್ಯಾಪಾರಿಗಳು ರಸ್ತೆಗೆ ಬಂದರು, ಆದರೆ, ಅಲ್ಲೂ ನೀರು ಹರಿಯಲಾರಂಭಿಸಿದ ಕಾರಣ ಗಂಟು ಮೂಟೆ ಕಟ್ಟಬೇಕಾಯಿತು. ವ್ಯಾಪಾರವನ್ನೇ ಅರ್ಧಕ್ಕೆ ಮೊಟಕುಗೊಳಿಸಿ ನಷ್ಟದೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದರು. ಬೆರಳೆಣಿಕೆ ಮಂದಿ ಮಳೆಯಲ್ಲೂ ವ್ಯಾಪಾರ ಮುಂದುವರಿಸಿ, ಗ್ರಾಹಕರು ಕೇಳಿದ ಬೆಲೆಗೆ ಮಾರಾಟ ಮಾಡಿದ ದೃಶ್ಯ ಕಂಡು ಬಂದಿತು.

ADVERTISEMENT

ಸಹಜ ಸ್ಥಿತಿಗೆ ಮಾರುಕಟ್ಟೆ

ವಾರಾಂತ್ಯದಲ್ಲಿ ಮಳೆ ಅಬ್ಬರದಿಂದಾಗಿ ಕ್ಷೀಣಿಸಿದ್ದ ಎಪಿಎಂಸಿ ವ್ಯಾಪಾರ ಈಗ ಸಹಜ ಸ್ಥಿತಿಗೆ ಬಂದಿದೆ. ಮಳೆಯ ಕಾರಣ ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿರಲಿಲ್ಲ. ಪರಿಣಾಮ ತರಕಾರಿ, ಸೊಪ್ಪುಗಳ ಬೆಲೆ ಇಳಿದಿತ್ತು. ಈಗ ಮಳೆ ಬಿಡುವು ನೀಡಿದ್ದು, ಆವಕದೊಂದಿಗೆ ಗ್ರಾಹಕರ ಸಂಖ್ಯೆಯೂ ಹೆಚ್ಚಿದೆ. ಬೆಲೆ ಹಿಂದಿನ ವಾರದಂತೆ ಸ್ಥಿರವಾಗಿದೆ.

10.ಕೆ.ಜಿ. ಹಸಿ ಮೆಣಸಿನಕಾಯಿ ಬೆಲೆ ಸೋಮವಾರದವರೆಗೂ ₹250–300 ಇತ್ತು. ಮಂಗಳವಾರದಿಂದ ₹400–500ಕ್ಕೆ ಮಾರಾಟ ಆಗುತ್ತಿದೆ. ಕಳೆದೊಂದು ತಿಂಗಳಿಂದ ₹30–35 ಇದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರದ ಗ್ರಾಹಕರ ಕೈಗೆಟುಕುವಂತಿದೆ. ಕಟ್ಟು ₹8–10ಕ್ಕೆ ಮಾರಾಟವಾಗುತ್ತಿದೆ. ಗಾಮನಗಟ್ಟೆ, ಧಾರವಾಡ ಹಾಗೂ ಬೆಳಗಾವಿಯ ಘಟಪ್ರಭಾದಿಂದ ಕೊತ್ತಂಬರಿ ಆವಕವಾಗುತ್ತಿದೆ.

ಧಾರವಾಡ ಜಿಲ್ಲೆ ಹಾಗೂ ನೆರೆಯ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ತರಕಾರಿ ಬರುತ್ತಿದೆ. ಮಹಾರಾಷ್ಟ್ರದ ಪುಣೆಯ ತರಕಾರಿ, ಸೊಪ್ಪು ಪೂರೈಕೆ ಭಾಗಶಃ ಸ್ಥಗಿತಗೊಂಡಿದೆ. ಸ್ಥಳೀಯ ರೈತರು ಮಳೆ ಆಶ್ರಯದಲ್ಲಿ ಬೆಳೆಯುತ್ತಿರುವ ಫಸಲು ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದ್ದು, ಆಗ ಬೆಲೆ ಕೊಂಚ ಇಳಿಯಬಹುದು ಎಂದು ವ್ಯಾಪಾರಿ ಮುಸ್ತಾಫ‘ಮೆಟ್ರೊ’ಗೆ ತಿಳಿಸಿದರು.

ಜವಾರಿ ಬೆಳ್ಳುಳ್ಳಿ ದರ ಏರಿಕೆ

ಮಳೆಯೊಂದಿಗೆ ಬಿತ್ತನೆ ಆರಂಭವಾಗಿರುವ ಕಾರಣ ಜವಾರಿ ಬೆಳ್ಳುಳ್ಳಿ ಬೆಲೆ ಹೆಚ್ಚಿದೆ. ಮುಂಗಾರು ತಡವಾಗಿ ಪ್ರವೇಶಿಸಿದ ಕಾರಣ ನಿರಾಸೆಗೊಂಡಿದ್ದ ಹಲವು ರೈತರು ಬಿತ್ತನೆ ಬೆಳ್ಳುಳ್ಳಿಯನ್ನು ಮಾರಾಟ ಮಾಡಿದ್ದರು. ಈಗ ಮಳೆ ಉತ್ತಮವಾಗಿದ್ದು, ಬಿತ್ತನೆಗೆ ಮನಸ್ಸು ಮಾಡಿದ್ದಾರೆ. ಆದರೆ, ಬಿತ್ತನೆ ಬೆಳ್ಳುಳ್ಳಿ ಸಿಗದಂತಾಗಿ ಬೇಡಿಕೆ ಹೆಚ್ಚಿದೆ. ಕ್ವಿಂಟಲ್‌ ₹8,000–8,500 ರಂತೆ ಮಾರಾಟವಾಗುತ್ತಿದೆ. ಗದಗ, ರಾಣೆಬೆನ್ನೂರು ಸೇರಿ ಹಲವೆಡೆ ಜವಾರಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ಶುಂಠಿ ಚೀಲ (60 ಕೆ.ಜಿ) ₹6500 ರಂತೆ ಮಾರಾಟವಾಗುತ್ತಿದೆ. ಆಲೂಗಡ್ಡೆ ಕ್ವಿಂಟಲ್‌ ₹1,200–1,400, ಬಿಜಾಪುರ (ತೆಲಗಿ) ಈರುಳ್ಳಿ ₹1,200–1,600, ಪುಣೆ ಈರುಳ್ಳಿ ₹1,200–1,800, ಎಂ.ಪಿ. ಮಾದರಿಯ ಬೆಳ್ಳುಳ್ಳಿ ಬೆಲೆ ಕ್ವಿಂಟಲ್‌ 40,00–5,000 ಇದೆ.

ಧಾನ್ಯ ಮಾರುಕಟ್ಟೆಯಲ್ಲಿ ಅಲಸಂದೆ ಕಾಳು ಕ್ವಿಂಟಲ್‌ಗೆ ₹4,609, ಒಣ ಮೆಣಸಿನಕಾಯಿ ₹11,000, ಕಡಲೆಕಾಳು ₹4,601, ಕುಸುಬೆ ₹4,459, ಗೋಧಿ ₹3,209, ಜೋಳ ₹2,729, ನೆಲಗಡಲೆ ₹5,800, ನವಣೆ ₹3,219, ಮೆಕ್ಕೆಜೋಳ ₹2,050, ಸಾಮೆ ₹2,200, ಸೋಯಾಬಿನ್ ₹3,619, ಹೆಸರುಕಾಳು ₹6,261ರಂತೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.