ADVERTISEMENT

ಮೌಲ್ಯಯುತ ಕಂಪನಿ: ಭಾರತಕ್ಕೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 19:39 IST
Last Updated 10 ಡಿಸೆಂಬರ್ 2022, 19:39 IST
   

ಬೆಂಗಳೂರು: ಜಗತ್ತಿನ 500 ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಭಾರತದ 20 ಕಂಪನಿಗಳು ಸ್ಥಾನ ಪಡೆದುಕೊಂಡಿವೆ. ಈ ಮೂಲಕ ಅತಿ ಹೆಚ್ಚು ಮೌಲ್ಯಯುತ ಕಂಪನಿಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ.

ಕಳೆದ ವರ್ಷ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ 8 ಕಂಪನಿಗಳು ಸ್ಥಾನ ಪಡೆದಿದ್ದವು. ಇದರಿಂದಾಗಿ ಭಾರತವು 9ನೇ ಸ್ಥಾನದಲ್ಲಿತ್ತು.

2022ರ ಹುರೂನ್‌ ಗ್ಲೋಬಲ್‌ 500 ಪಟ್ಟಿಯ ಪ್ರಕಾರ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಮಾರುಕಟ್ಟೆ ಮೌಲ್ಯವು ₹16.56 ಲಕ್ಷ ಕೋಟಿ ಆಗಿದ್ದು, ಭಾರತದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಕಂಪನಿಯು 34ನೇ ಸ್ಥಾನದಲ್ಲಿದೆ.

ADVERTISEMENT

₹11.39 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪನಿಯು ಎರಡನೇ ಮತ್ತು ₹7.95 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೂರನೇ ಸ್ಥಾನ ಪಡೆದಿರುವ ಭಾರತದ ಕಂಪನಿಗಳಾಗಿವೆ.

ಅದಾನಿ ಪ್ರವೇಶ: 500 ಕಂಪನಿಗಳ ಪಟ್ಟಿಯಲ್ಲಿ ಅದಾನಿ ಸಮೂಹದ ಅದಾನಿ ಟ್ರಾನ್ಸ್‌ಮಿಷನ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಗಳು ಸ್ಥಾನ ಪಡೆದುಕೊಂಡಿವೆ. ಈ ಕಂಪನಿಗಳ ಒಟ್ಟು ಮೌಲ್ಯವು ₹14.18 ಲಕ್ಷ ಕೋಟಿಯಷ್ಟು ಇದೆ.

ವಿಪ್ರೊ, ಜೂಮ್‌, ಅಡಿಡಾಸ್‌, ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವ ಪ್ರಮುಖ ಕಂಪನಿಗಳಾಗಿವೆ.

ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಜಾಗತಿಕವಾಗಿ ಆ್ಯಪಲ್‌ ಮೊದಲ ಸ್ಥಾನ ಉಳಿಸಿಕೊಂಡಿದೆ. ಮೈಕ್ರೊಸಾಫ್ಟ್‌ ಎರಡನೇ ಸ್ಥಾನದಲ್ಲಿದೆ. ಅಮೆಜಾನ್‌ ಅನ್ನು ಹಿಂದಿಕ್ಕಿ ಆಲ್ಫಾಬೆಟ್‌ ಮೂರನೇ ಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.