ನವದೆಹಲಿ: ಹೊಸ ಐ.ಟಿ. ಪೋರ್ಟಲ್ ಬಳಕೆಗೆ ಬಂದು ಎರಡು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಮುಂದುವರಿದಿರುವ ಕುರಿತು ಖುದ್ದಾಗಿ ವಿವರಣೆ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಇನ್ಫೊಸಿಸ್ ಸಿಇಒ ಸಲೀಲ್ ಪಾರೇಖ್ ಅವರಿಗೆ ಸೂಚಿಸಿದೆ.
ಜಾಲತಾಣವು ಸತತ ಎರಡು ದಿನಗಳಿಂದ ಬಳಕೆಗೆ ಲಭ್ಯವಾಗದ ಬೆನ್ನಲ್ಲೇ ಸಚಿವಾಲಯವು ಈ ಕ್ರಮ ಕೈಗೊಂಡಿದೆ. ಸಮಸ್ಯೆಗಳ ಕುರಿತಾಗಿ ಪಾರೇಖ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೋಮವಾರ ವಿವರಣೆ ನೀಡಬೇಕಿದೆ. ಆಗಸ್ಟ್ 21ರಿಂದ ಜಾಲತಾಣವು ಬಳಕೆಗೆ ಲಭ್ಯವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿದೆ.
ಆದಾಯ ತೆರಿಗೆ ಇಲಾಖೆಯ ಜಾಲತಾಣವು ತುರ್ತು ನಿರ್ವಹಣೆಯಲ್ಲಿದೆ. ಅದು ಬಳಕೆಗೆ ಲಭ್ಯವಾದ ಬಳಿಕ ಆ ಬಗ್ಗೆ ತೆರಿಗೆಪಾವತಿದಾರರಿಗೆ ಮಾಹಿತಿ ನೀಡಲಾಗುವುದು. ಅಡಚಣೆಗಾಗಿ ವಿಷಾಧಿಸುತ್ತೇವೆ ಎಂದು ಇನ್ಫೊಸಿಸ್ ಇಂಡಿಯಾ ಬಿಸಿನೆಸ್ ಯುನಿಟ್‌ನ ಟ್ವಿಟರ್ ಖಾತೆಯನ್ನು ನಿರ್ವಹಿಸುವ ಇನ್ಫೊಸಿಸ್ ಇಂಡಿಯಾ ಬಿಸಿನೆಸ್ ಭಾನುವಾರ ಟ್ವೀಟ್ ಮಾಡಿದೆ.
‘ಇನ್ಫೊಸಿಸ್, ಗೊಂದಲಮಯವಾಗಿಸಿರುವ ಕೇಂದ್ರ ಸರ್ಕಾರದ ಎರಡನೇ ಅತಿದೊಡ್ಡ ಯೋಜನೆ ಇದು. ಮೊದಲನೆಯದು ಜಿಎಸ್‌ಟಿ ಜಾಲತಾಣ. ಎರಡನೆಯದು ಆದಾಯ ತೆರಿಗೆ ಇಲಾಖೆಯ ಜಾಲತಾಣ. ಸತತ ಎರಡು ವೈಫಲ್ಯಗಳು ಕಾಕತಾಳೀಯ ಆಗಿರಲು ಸಾಧ್ಯವೇ ಇಲ್ಲ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಐ.ಟಿ. ಇಲಾಖೆಯ ಟ್ವೀಟ್ ಉದ್ದೇಶಿಸಿ ತಾವು ಟ್ವೀಟ್ ಮಾಡಿದ್ದಾರೆ.
ತೆರಿಗೆ ಪಾವತಿದಾರರು ಗುರುತಿಸಿದ್ದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈಚೆಗಷ್ಟೇ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪೋರ್ಟಲ್‌ನಲ್ಲಿ ಇರುವ ಸಮಸ್ಯೆಗಳ ಕುರಿತಾಗಿ 700ಕ್ಕೂ ಅಧಿಕ ಇ–ಮೇಲ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ ಸಮಸ್ಯೆಗಳು ಇರುವ ಬಗ್ಗೆ ತಿಳಿಸಲಾಗಿದೆ. ತೆರಿಗೆದಾರರು, ತೆರಿಗೆ ವೃತ್ತಿಪರರು ಮತ್ತು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಒಳಗೊಂಡು ಹಲವರು ಸಮಸ್ಯೆಗಳ ಕುರಿತು ದೂರು ನೀಡಿದ್ದರು ಎಂದೂ ಅವರು ತಿಳಿಸಿದ್ದರು.
ಇನ್ಫೊಸಿಸ್ ಅಭಿವೃದ್ಧಿಪಡಿಸಿರುವ www.incometax.gov.in ಆದಾಯ ತೆರಿಗೆಗೆ ಸಂಬಂಧಿಸಿದ ಜಾಲತಾಣವನ್ನು ಜೂನ್ 7ರಂದು ಬಿಡುಗಡೆ ಮಾಡಲಾಗಿತ್ತು. ಆ ದಿನದಿಂದಲೂ ಜಾಲತಾಣದಲ್ಲಿ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಈ ಕಾರಣದಿಂದಾಗಿ ಆದಾಯ ತೆರಿಗೆ ಇಲಾಖೆಯು ಮ್ಯಾನುಯಲ್ ಆಗಿ ಐ.ಟಿ. ವಿವರ ಸಲ್ಲಿಸಲು ಅವಕಾಶ ನೀಡಬೇಕಾಯಿತು.
ನಿರ್ಮಲಾ ಸೀತಾರಾಮನ್ ಅವರು ಜೂನ್ 22ರಂದು ಇನ್ಫೊಸಿಸ್ ತಂಡದೊಂದಿಗೆ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದರು. ಕಳೆದ ವಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ನಿರ್ಮಲಾ ಅವರು, ‘ಜಾಲತಾಣದಲ್ಲಿನ ತಾಂತ್ರಿಕ ಸಮಸ್ಯೆಗಳು ಮುಂದಿನ ಕೆಲವೇ ದಿನಗಳಲ್ಲಿ ಬಗೆಹರಿಯಲಿವೆ. ಸಮಸ್ಯೆಗಳನ್ನು ಸರಿಪಡಿಸುವಂತೆ ಇನ್ಫೊಸಿಸ್ ಕಂಪನಿಗೆ ಪದೇ ಪದೇ ನೆನಪಿಸಲಾಗುತ್ತಿದೆ. ಜೂನ್‌ನಲ್ಲಿ ಇದ್ದಂತಹ ಸ್ಥಿತಿಗೆ ಹೋಲಿಸಿದರೆ ಬಹಳಷ್ಟು ಸುಧಾರಣೆ ಕಂಡುಬಂದಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.