ADVERTISEMENT

ಶ್ರೀನಿವಾಸನ್‌ ಸ್ವಾಮಿಗೆ ಐಎಎ ಗೋಲ್ಡನ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
ಆರ್‌.ಕೆ. ಸ್ವಾಮಿ ಲಿಮಿಟೆಡ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್‌ ಸ್ವಾಮಿ ಅವರು, ಪ್ರತಿಷ್ಠಿತ ‘ಐಎಎ ಗೋಲ್ಡನ್ ಕಂಪಾಸ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ (ಬಲಬದಿ)
ಆರ್‌.ಕೆ. ಸ್ವಾಮಿ ಲಿಮಿಟೆಡ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್‌ ಸ್ವಾಮಿ ಅವರು, ಪ್ರತಿಷ್ಠಿತ ‘ಐಎಎ ಗೋಲ್ಡನ್ ಕಂಪಾಸ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ (ಬಲಬದಿ)   

ಬೆಂಗಳೂರು: ಆರ್‌.ಕೆ. ಸ್ವಾಮಿ ಲಿಮಿಟೆಡ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್‌ ಸ್ವಾಮಿ ಅವರು, ಇಂಟರ್‌ನ್ಯಾಷನಲ್‌ ಅಡ್ವರ್ಟೈಸಿಂಗ್ ಅಸೋಸಿಯೇಷನ್‌ ಕೊಡಮಾಡುವ ಪ್ರತಿಷ್ಠಿತ ‘ಐಎಎ ಗೋಲ್ಡನ್ ಕಂಪಾಸ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಮಲೇಷ್ಯಾದ ಪೆನಾಂಗ್‌ನಲ್ಲಿ ನಡೆದ 45ನೇ ಐಎಎ ವರ್ಲ್ಡ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ಪೆನಾಂಗ್‌ನ ಗವರ್ನರ್‌ ಥುನ್ ಅಹ್ಮದ್ ಫುಜಿ ಅಬ್ದುಲ್ ರಜಾಕ್ ಅವರು, ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. 

ಜಾಗತಿಕ ಜಾಹೀರಾತು ಮಾರುಕಟ್ಟೆ ಹಾಗೂ ಮಾಧ್ಯಮ ವಲಯಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಕೈಗಾರಿಕಾ ವಲಯದ ಉದ್ಯಮಿಯೊಬ್ಬರಿಗೆ ಪ್ರಥಮ ಬಾರಿಗೆ ಈ ಪ್ರಶಸ್ತಿ ಲಭಿಸಿದೆ.

ADVERTISEMENT

‘ಸುಂದರ್‌ ಸ್ವಾಮಿ’ ಎಂದೇ ಅವರು ಹೆಚ್ಚು ಚಿರಪರಿಚಿತರಾಗಿದ್ದಾರೆ. ಅವರ ಒಡೆತನದ ಕಂಪನಿಯು ಸಂಯೋಜಿತ ಮಾರುಕಟ್ಟೆ ಸೇವೆ ಒದಗಿಸುತ್ತಿದ್ದು, ಮುಂದಿನ ವಾರದ ಆರಂಭದಲ್ಲಿ ಷೇರುಪೇಟೆಯಲ್ಲಿ ನೋಂದಣಿಯಾಗಲಿದೆ. 

ಪ್ರಸ್ತುತ ಏಷಿಯನ್‌ ಫೆಡರೇಷನ್‌ ಆ‍ಫ್‌ ಅಡ್ವರ್ಟೈಸಿಂಗ್ ಅಸೋಸಿಯೇಷನ್‌ (ಎಎಫ್‌ಎಎ) ಹಾಗೂ ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯೂಲೇಷನ್ಸ್‌ನ (ಎಬಿಸಿ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

‘ನನ್ನ ಕಂಪನಿಯ ವೃತ್ತಿಪರರು ಹಾಗೂ ಉದ್ಯಮದ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಲು ನನಗೆ ಖುಷಿಯಾಗುತ್ತಿದೆ. ಹಲವು ವರ್ಷಗಳಿಂದ ನಾನು ಕೈಗಾರಿಕಾ ವಲಯದಲ್ಲಿ ಆರಂಭಿಸಿದ ಯೋಜನೆಗಳಿಗೆ ಎಲ್ಲರೂ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದಾರೆ. ಈ ಪ್ರಶಸ್ತಿಯನ್ನು ನನ್ನ ತಂದೆ ಆರ್‌.ಕೆ. ಸ್ವಾಮಿ ಅವರಿಗೆ ಅರ್ಪಿಸುತ್ತೇನೆ. ಉದ್ಯಮದ ಅಭಿವೃದ್ಧಿಗೆ ಮೀಸಲಿಟ್ಟ ಸಮಯವು ವ್ಯರ್ಥವಾಗುವುದಿಲ್ಲ. ಅದು ನಮ್ಮನ್ನು ಪೋಷಿಸುತ್ತದೆ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.

‘ಸುಂದರ್‌ ಅವರ ನಾಯಕತ್ವವು ಮಾದರಿಯಾಗಿದೆ. ತಂಡದ ಸದಸ್ಯರನ್ನು ಎಂದಿಗೂ ಅವರು ನಿರ್ಲಕ್ಷಿಸುವುದಿಲ್ಲ. ಉದ್ಯಮದ ಅಭಿವೃದ್ಧಿಗಾಗಿ ಸಮಯ ಮೀಸಲಿಡುವ ಅವರ ಕಾರ್ಯಶೈಲಿಯು ನನ್ನಲ್ಲಿ ಬೆರಗು ಮೂಡಿಸುತ್ತದೆ’ ಎಂದು ಅವರೊಟ್ಟಿಗೆ ಹಲವು ವರ್ಷಗಳಿಂದ ಕೆಲಸ ನಿರ್ವಹಿಸಿರುವ ಜಾಹೀರಾತು ವಿಭಾಗದ ಹಿರಿಯ ಅನುಭವಿ ರಮೇಶ್‌ ನಾರಾಯಣ್‌ ಹೇಳಿದ್ದಾರೆ.

1998ರ ಅಕ್ಟೋಬರ್‌ನಲ್ಲಿ ಅಡ್ವರ್ಟೈಸಿಂಗ್‌ ಏಜೆನ್ಸಿಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಎಎಎಐ) ಕಾರ್ಯಕಾರಿ ಸಮಿತಿಗೆ ಶ್ರೀನಿವಾಸನ್‌ ಸ್ವಾಮಿ ಸೇರ್ಪಡೆಯಾದರು. ಸತತವಾಗಿ ಮೂರು ಬಾರಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ. 

ಇಂಟರ್‌ನ್ಯಾಷನಲ್‌ ಅಡ್ವರ್ಟೈಸಿಂಗ್‌ ಅಸೋಸಿಯೇಷನ್‌ (ಐಎಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಕೊಚ್ಚಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ 44ನೇ ಐಎಎ ವರ್ಲ್ಡ್‌ ಕಾಂಗ್ರೆಸ್ ಅಧಿವೇಶನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.