ADVERTISEMENT

ಚಿನ್ನದ ಆಮದು ಸುಂಕ ಇಳಿಕೆ ಸಾಧ್ಯತೆ

ಬಜೆಟ್‌: ಕಳ್ಳಸಾಗಣೆ ತಡೆಯಲು ಕ್ರಮ

ಅನ್ನಪೂರ್ಣ ಸಿಂಗ್
Published 21 ಜನವರಿ 2022, 20:16 IST
Last Updated 21 ಜನವರಿ 2022, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ಕಳ್ಳಸಾಗಣೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 4 ರಿಂದ ಶೇ 5ರವರೆಗೆ ತಗ್ಗಿಸುವ ಸಾಧ್ಯತೆ ಇದೆ. ಸದ್ಯ ಆಮದು ಸುಂಕವು ಶೇ 7.5ರಷ್ಟಿದೆ.

ಕಳೆದ ಬಾರಿಯ ಬಜೆಟ್‌ನಲ್ಲಿ ಆಮದು ಸುಂಕವನ್ನು ಶೇ 12.5 ರಿಂದ ಶೇ 7.5ಕ್ಕೆ ಇಳಿಕೆ ಮಾಡಲಾಗಿತ್ತು. ಇದಕ್ಕೆ ವಿವಿಧ ರೀತಿಯ ಸೆಸ್‌ ಮತ್ತು ಶೇ 3ರಷ್ಟು ಜಿಎಸ್‌ಟಿ ಸೇರಿಸಿದರೆ ಆಮದು ಸುಂಕವು ಶೇ 10.75ರಷ್ಟು ಆಗುತ್ತದೆ.

ಚಿನ್ನದ ಮೇಲಿನ ಗರಿಷ್ಠ ಸುಂಕದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಅಪೇಕ್ಷಿತ ವರಮಾನ ತಂದುಕೊಟ್ಟಿಲ್ಲ. ಹೀಗಾಗಿ ಈ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

2004ರಲ್ಲಿ ಚಿನ್ನದ ಮೇಲಿನ ಆಮದು ಸುಂಕವು ಶೇ 2ರಷ್ಟು ಇತ್ತು. 2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಆಮದು ಸುಂಕವನ್ನು ಶೇ 10ಕ್ಕೆ ಏರಿಕೆ ಮಾಡಿತು. ಆ ಬಳಿಕ 2019ರಲ್ಲಿ ಮೋದಿ ನೇತೃತ್ವದ ಸರ್ಕಾರ ಸುಂಕವನ್ನು ಶೇ 12.5ಕ್ಕೆ ಹೆಚ್ಚಿಸಿತ್ತು.

ಭಾರತವು ಪ್ರತಿ ವರ್ಷವೂ 1,000 ಟನ್‌ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಹೆಚ್ಚಿನ ಪಾಲು ಅನಧಿಕೃತ ಮತ್ತು ಕಾಳಸಂತೆಯಿಂದಲೇ ಬರುತ್ತಿದೆ. ಉದ್ಯಮದ ಅಂದಾಜಿನ ಪ್ರಕಾರ, ಭಾರತದ ಚಿನ್ನದ ಬೇಡಿಕೆಯ ನಾಲ್ಕನೇ ಮೂರು ಭಾಗದಷ್ಟನ್ನು ಕಾಳಸಂತೆಯೇ ಈಡೇರಿಸುತ್ತಿದೆ.

ಈಚಿನ ಅಧಿಕೃತ ವರದಿಗಳ ಪ್ರಕಾರ, ಹೆಚ್ಚಿನ ಸುಂಕ ವಿಧಿಸುವುದರಿಂದ ಕಳ್ಳಸಾಗಣೆ ಹೆಚ್ಚಾಗುವುದಲ್ಲದೇ ಚಿನ್ನದ ಆಭರಣಗಳ ರಫ್ತು ವಹಿವಾಟಿನ ಮೇಲೆಯೂ ಪರಿಣಾಮ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.