ADVERTISEMENT

ಅನ್ಯರ ಆದಾಯಕ್ಕೂ ನೀವು ತೆರಿಗೆ ಕಟ್ಟಬೇಕು

ಡಿಪಿಶ್ರೀ ದೈತೋಟ
Published 21 ಮೇ 2019, 19:43 IST
Last Updated 21 ಮೇ 2019, 19:43 IST
ಆದಾಯ ತೆರಿಗೆ
ಆದಾಯ ತೆರಿಗೆ   

ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಕೆಲವೊಂದು ಬಾರಿ ನಾವು ನಮ್ಮ ಕುಟುಂಬದ ಸದಸ್ಯರ ಹಾಗೂ ಅನ್ಯರ ಆದಾಯಕ್ಕೂ ತೆರಿಗೆ ಬಾಧ್ಯಸ್ಥರಾಗಿರುತ್ತೇವೆ ಎನ್ನುವ ನಿಯಮ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಆದರೆ, ಕಾನೂನಿನ ಈ ಉಪವಿಧಿಗಳನ್ನು ಬಹುತೇಕ ಮಂದಿ ಹಗುರವಾಗಿ ತೆಗೆದುಕೊಂಡು ತಮ್ಮ ಕುಟುಂಬದ ಸದಸ್ಯರ ಹೆಸರಲ್ಲೋ, ಸಮೀಪವರ್ತಿಗಳ ಹೆಸರಲ್ಲೋ ಆದಾಯವನ್ನು ಸುಲಭವಾಗಿ ವರ್ಗಾಯಿಸಿ ತೆರಿಗೆ ಉಳಿಸಲು ಹವಣಿಸುತ್ತಾರೆ. ಆದರೆ, ಅಂತಹ ಅದಾಯಗಳನ್ನು ಆಸ್ತಿಯ ಮೂಲ ವಾರಾಸುದಾರನೇ ತನ್ನ ಆದಾಯದಲ್ಲಿ ಘೋಷಿಸಬೇಕೆನ್ನುವುದನ್ನು ಆದಾಯ ತೆರಿಗೆ
ನಿಯಮ ಹೇಳುತ್ತದೆ.

ನಿಯಮಗಳು ಹಾಗಿದ್ದರೂ ಅದರ ಬಗ್ಗೆ ಸರಿಯಾದ ಅರಿವು ಇಲ್ಲದೆ ಅಥವಾ ಉದ್ದೇಶಪೂರ್ವಕವಾಗಿ ಅನೇಕ ತೆರಿಗೆ ಪಾವತಿದಾರರು ಯಾವುದೇ ದಾಖಲೆಗಳಿಲ್ಲದೆ ಆದಾಯವನ್ನು ಅನ್ಯರ ಹೆಸರಲ್ಲಿ ಸುಲಭವಾಗಿ ವರ್ಗಾಯಿಸುತ್ತಿರುವುದು ನಿಯಮ ಬಾಹಿರ. ಆ ರೀತಿ ವರ್ಗಾಯಿಸಿದವರ ಆದಾಯದಲ್ಲೇ ಅಂತಹ ಆದಾಯವನ್ನು ಸೇರ್ಪಡೆಗೊಳಿಸಿ ತೆರಿಗೆ ಕಟ್ಟಬೇಕಾಗುತ್ತದೆ. ಈ ರೀತಿಯ ಕೆಲವು ಸನ್ನಿವೇಶಗಳನ್ನು ನಮ್ಮ ದೈನಂದಿನ ಬದುಕಿನ ದೃಷ್ಟಾಂತಗಳನ್ನು ಆಧಾರವಾಗಿರಿಸಿ ಸಾಮಾನ್ಯ ತೆರಿಗೆದಾರರ ದೃಷ್ಟಿಕೋನದಿಂದ ಇಲ್ಲಿ ವಿಶ್ಲೇಷಿಸಲಾಗಿದೆ.

ಜಂಟಿ ಆದಾಯದ ಮೇಲಿನ ತೆರಿಗೆ

ADVERTISEMENT

ಅನೇಕಬಾರಿ ಜಂಟಿ ಠೇವಣಿ ಖಾತೆಗಳನ್ನು ತೆರೆದು ಕಡಿಮೆ ಆದಾಯ ಇರುವವರು ಬಡ್ಡಿ ಆದಾಯ ಘೋಷಿಸುತ್ತಾರೆ ಅಥವಾ ಸಮನಾಗಿ ಭಾಗ ಮಾಡಿ ಇತರ ಆದಾಯಗಳೊಂದಿಗೆ ಘೋಷಿಸುತ್ತಾರೆ. ಖಾತೆಯನ್ನು ತೆರೆಯುವಾಗ ಮೊದಲು ಯಾರ ಹೆಸರಲ್ಲಿ ಠೇವಣಿ ದಾಖಲಾಗಿರುತ್ತದೋ ಅವರೇ ತೆರಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್ ಅವರೊಬ್ಬರ ಹೆಸರಲ್ಲೇ ತೆರಿಗೆ ಕಡಿತಗೊಳಿಸಿರುತ್ತದೆ. ಹೀಗಾಗಿ ಜಂಟಿ ಖಾತೆಗಳನ್ನು ವ್ಯವಹಾರದ ಸೌಲಭ್ಯಕ್ಕೋಸ್ಕರ ತೆರೆಯಬಹುದೇ ವಿನಾ ತೆರಿಗೆ ಉಳಿಸುವ ಏಕೈಕ ಉದ್ದೇಶದಿಂದ ತೆರೆಯುವುದು ಅಷ್ಟೊಂದು ಪ್ರಯೋಜನಕಾರಿಯಾಗಲಾರದು.

ಯಾವೆಲ್ಲ ಆದಾಯ ಸೇರಿಸಲಾಗುತ್ತದೆ

ಅನ್ಯ ವ್ಯಕ್ತಿಗಳ ಯಾವ್ಯಾವ ಆದಾಯಗಳನ್ನು ಯಾವೆಲ್ಲ ಸಂದರ್ಭಗಳಲ್ಲಿ ತೆರಿಗೆದಾರನ ಆದಾಯದಲ್ಲಿ ಸೇರಿಸಲಾಗುತ್ತದೆ ಎಂಬುದನ್ನು ಸಾಮಾನ್ಯ ನಿಯಮಗಳ ಪ್ರಕಾರ ತಿಳಿದುಕೊಳ್ಳಬೇಕು. ಯಾವುದೇ ವ್ಯಕ್ತಿ ಸಮರ್ಪಕ ಮೌಲ್ಯ ಪಾವತಿಸದೆ ಆಸ್ತಿಯನ್ನು ವರ್ಗಾವಣೆ ಮಾಡದೆ ಆ ಆಸ್ತಿಯಿಂದ ಬರುವ ಆದಾಯವನ್ನು ಮಾತ್ರ ಇತರರಿಗೆ ವರ್ಗಾಯಿಸಿದ್ದರೆ, ಪತಿ ಅಥವಾ ಪತ್ನಿ ಆದಾಯ ಸೃಷ್ಟಿಸುವ ಆಸ್ತಿಯನ್ನು ತಮ್ಮ ಹೆಸರಲ್ಲೇ ಇರಿಸಿ ಕೇವಲ ಅದರಿಂದ ಬರುವ ಆದಾಯವನ್ನು ಮಾತ್ರ ಪರಸ್ಪರ ವರ್ಗಾಯಿಸಿದ್ದರೆ, ಪತಿ ಅಥವಾ ಪತ್ನಿ ಅವರ ಆಸ್ತಿಗೆ ಸಂಬಂಧಪಟ್ಟ ಸಮರ್ಪಕ ಮೌಲ್ಯವನ್ನು ಪರಸ್ಪರ ಪಾವತಿಸದೆ ಆಸ್ತಿ ಹಾಗೂ ಆದಾಯ ಎರಡನ್ನೂ ತಮ್ಮೊಳಗೆ ವರ್ಗಾಯಿಸಿದ್ದರೆ ಅನ್ಯರ ಆದಾಯಕ್ಕಾಗಿ ತೆರಿಗೆ ಕಟ್ಟಬೇಕಾಗುವ ’ಕ್ಲಬ್ಬಿಂಗ್ ನಿಯಮಗಳು’ ಅನ್ವಯಿಸುತ್ತವೆ.

ಪ್ರತಿಫಲಾಪೇಕ್ಷೆ ಇರಿಸಿ ಆಸ್ತಿ ವರ್ಗಾವಣೆ ಮಾಡಿದ್ದರೆ, ಕಿರಿ ವಯಸ್ಸಿನ ಮಕ್ಕಳ ಹೆಸರಲ್ಲಿ ಆದಾಯ ಗಳಿಸುವ ಆಸ್ತಿ ಅಥವಾ ಹೂಡಿಕೆ ಹೊಂದಿದ್ದರೆ, ವೈಯಕ್ತಿಕ ಹಿನ್ನೆಲೆ ಅಥವಾ ವೃತ್ತಿ ನಿಪುಣತೆ ಇಲ್ಲದೆ ಕೇವಲ ನಾಮ ಮಾತ್ರ ಉದ್ದೇಶದಿಂದ ಕೌಟುಂಬಿಕ ವ್ಯವಹಾರದಲ್ಲಿ ಪರಸ್ಪರ ಪತಿ-ಪತ್ನಿಗೆ ಪಾವತಿಸುವ ವೇತನ, ಮಗನ ಪತ್ನಿಯ (ಸೊಸೆ) ಹೆಸರಲ್ಲಿ ವರ್ಗಾಯಿಸಿದ ಆಸ್ತಿ ಇತ್ಯಾದಿಗಳ ಮೇಲಿನ ಆದಾಯಕ್ಕೆ ಮೂಲ ಆಸ್ತಿ ವಾರಾಸುದಾರೇ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವುದು ಆದಾಯ ಸೇರ್ಪಡೆ ನಿಯಮವಾಗಿದೆ.

ಅಪ್ರಾಪ್ತ ವಯಸ್ಕ ಮಕ್ಕಳ ಆದಾಯ

ಬಹಳಷ್ಟು ಸಂದರ್ಭಗಳಲ್ಲಿ ತಂದೆ-ತಾಯಂದಿರು ತೆರಿಗೆ ಉಳಿಸುವುದಕ್ಕೋಸ್ಕರ ಮಕ್ಕಳ ಹೆಸರಲ್ಲಿ ನಿಶ್ಚಿತ ಠೇವಣಿ ಇಟ್ಟಿರುತ್ತಾರೆ. ಇಂತಹ ಠೇವಣಿಗಳ ಮೇಲೆ ಮಕ್ಕಳ ಹೆಸರಲ್ಲಿ ಖಾತೆಗೆ ಬಡ್ಡಿಯೂ ಬರುತ್ತದೆ. ಠೇವಣಿ ಅವರ ಹೆಸರಲ್ಲಿ ಇಲ್ಲದ ಕಾರಣ ಇಂತಹ ಬಡ್ಡಿ ಆದಾಯದ ಮೇಲೆ ತೆರಿಗೆ ಅನ್ವಯವಾಗುವುದಿಲ್ಲ ಎನ್ನುವ ನಿಲುವಿಗೆ ಬಂದಿರುತ್ತಾರೆ.

ಮಕ್ಕಳ ಖಾತೆಗೆ ತಂದೆ ಅಥವಾ ತಾಯಿಯ ಪ್ಯಾನ್ ಸಂಖ್ಯೆ ಜೋಡಿಸಿರುತ್ತಾರೆ. ಹೀಗಿರುವಾಗ, ಮಕ್ಕಳು 18 ವರ್ಷ ಪೂರೈಸುವವರೆಗೆ ಬರುವ ಬಡ್ಡಿ ಆದಾಯವನ್ನು ತಂದೆ ಅಥವಾ ತಾಯಿ ಇವರಿಬ್ಬರ ಆದಾಯದಲ್ಲಿ ಯಾರ ಆದಾಯ ಅಧಿಕವೋ ಅವರ ಆದಾಯದಲ್ಲಿ ಸೇರಿಸಲಾಗುತ್ತದೆ.

ಎರಡನೆ ಹಂತದ ಆದಾಯ

ಯಾವುದೇ ವ್ಯಕ್ತಿ ಎರಡನೆಯ ಹಂತದಲ್ಲಿ ಗಳಿಸುವ ಆದಾಯದ ಮೇಲಿನ ತೆರಿಗೆ ಹೊರೆ ಆ ಹಂತದಲ್ಲಿ ಆದಾಯ ಗಳಿಸಿದ ವ್ಯಕ್ತಿಯ ಮೇಲೆ ಇರುತ್ತದೆಯೇ ಹೊರತು ಮೂಲ ಆದಾಯವನ್ನು ಯಾರ ಆದಾಯದಲ್ಲಿ ಸೇರಿಸಲಾಗಿದೆಯೋ ಅವರ ಮೇಲೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಎರಡನೆಯ ಹಂತದಲ್ಲಿ ಗಳಿಸಿದ ಆದಾಯಕ್ಕೆ ಕ್ಲಬ್ಬಿಂಗ್ ನಿಯಮಗಳು ಅನ್ವಯಿಸುವುದಿಲ್ಲ.

ಉದಾಹರಣೆಗೆ, ಒಬ್ಬ ತೆರಿಗೆದಾರ ವಾರ್ಷಿಕವಾಗಿ ಹತ್ತು ಲಕ್ಷ ರೂಪಾಯಿ ಬಾಡಿಗೆ ಬರುವ ಮನೆಯನ್ನು ಯಾವುದೇ ಹಣಕಾಸಿನ ಅಪೇಕ್ಷೆಗಳಿಲ್ಲದೆ ತನ್ನ ಪತ್ನಿಯ ಹೆಸರಿಗೆ ಬರುವಂತೆ ವರ್ಗಾಯಿಸಿದ್ದಾನೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ಪತ್ನಿಯ ಖಾತೆಗೆ ಬರುವ ಮನೆ ಬಾಡಿಗೆ ಆದಾಯವನ್ನು ಕ್ಲಬ್ಬಿಂಗ್ ನಿಯಮಗಳ ಪ್ರಕಾರ ಗಂಡನ ಒಟ್ಟು ಆದಾಯದಲ್ಲಿ ಸೇರಿಸಬೇಕಾಗುತ್ತದೆ. ಆದರೆ, ಪತ್ನಿಗೆ ಆ ಬಾಡಿಗೆ ಹಣದ ಮರು ಹೂಡಿಕೆಯಿಂದ ಬರುವ ಬಡ್ಡಿ ಆದಾಯ ಎರಡನೆಯ ಹಂತದ ಆದಾಯವಾದ ಕಾರಣ ಅಂತಹ ಆದಾಯವನ್ನು ಗಂಡನ ಆದಾಯದೊಡನೆ ಸೇರಿಸುವ ಅಗತ್ಯವಿಲ್ಲ. ಆರ್ಥಾತ್ ಆದಾಯದ ಮೇಲಿನ ಆದಾಯಕ್ಕೆ ತೆರಿಗೆ ಪಾವತಿ ಹೊಣೆ ಆದಾಯ ಗಳಿಸಿದವರ ಮೇಲಿರುತ್ತದೆ.

ಇತರ ಅಂಶಗಳು

ಆದಾಯವನ್ನು ಆಸ್ತಿಯ ಮೂಲ ವಾರಾಸುದಾರನ ಆದಾಯದಲ್ಲಿ ಸೇರಿಸಲಾಗುತ್ತದೋ ಅದೇ ರೀತಿ ನಷ್ಟವನ್ನೂ ಇಲ್ಲಿ ಪರಿಗಣಿಸಲಾಗುತ್ತದೆ. ಅಂದರೆ ಯಾರ ಆದಾಯವನ್ನು ತೆರಿಗೆ ಲೆಕ್ಕಕ್ಕೋಸ್ಕರ ಸೇರಿಸಲಾಗುತ್ತದೋ ಆ ಆಸ್ತಿಗೆ ಸಂಬಂಧಪಟ್ಟ ನಷ್ಟವನ್ನೂ ಆದಾಯದೊಂದಿಗೆ ವಜಾ ಮಾಡುವ ಅವಕಾಶಗಳಿರುತ್ತವೆ.

ಅಂಗವಿಕಲ ಮಕ್ಕಳು ಯಾವುದೇ ರೂಪದಲ್ಲಿ ಆದಾಯ ಗಳಿಸಿದ ಸಂದರ್ಭದಲ್ಲಿ ಅದನ್ನು ತಂದೆ - ತಾಯಿಯ ಆದಾಯದಲ್ಲಿ ಸೇರಿಸಲಾಗುವುದಿಲ್ಲ. ಅದೇ ರೀತಿ, ಯಾವುದೇ ಮಕ್ಕಳು ತಮ್ಮ ವೈಯಕ್ತಿಕ ಪ್ರತಿಭೆ ಹಾಗೂ ಸಾಧನೆಯಿಂದ ಗಳಿಸಿದ ಆದಾಯವನ್ನೂ ತಂದೆ - ತಾಯಿಯ ಆದಾಯದ ಭಾಗವಾಗಿ ಪರಿಗಣಿಸಲಾಗುವುದಿಲ್ಲ.

ಕಿರಿ ವಯಸ್ಸಿನ ಮಕ್ಕಳ ಆದಾಯವನ್ನು ತಂದೆ - ತಾಯಿಯ ಆದಾಯದಲ್ಲಿ ಸೇರಿಸಲಾಗುತ್ತದೆಯೇ ಹೊರತು ಮೇಲೆ ಉಲ್ಲೇಖಿಸಿದ ಸನ್ನಿವೇಶಗಳಲ್ಲಿ ತಂದೆ- ತಾಯಿಯ ಆದಾಯವನ್ನು ಮಕ್ಕಳ ಆದಾಯದಲ್ಲಿ ಸೇರಿಸುವ ಅವಕಾಶ ಕ್ಲಬ್ಬಿಂಗ್ ನಿಯಮಗಳಲ್ಲಿಲ್ಲ.

‘ಪಾಕೆಟ್ ಮನಿ’ ರೂಪದಲ್ಲಿ ಪತಿ ತನ್ನ ಪತ್ನಿಗೆ ನೀಡುವ ಮೊತ್ತದಿಂದ ಅಥವಾ ತನ್ನ ಸ್ವಂತ ಉಳಿತಾಯದಿಂದ ಪತ್ನಿ ಯಾವುದೇ ಆಸ್ತಿಯನ್ನು ಖರೀದಿಸಿ ಅದರಿಂದ ಆದಾಯ ಗಳಿಸಿದರೆ ಅಂತಹ ಆದಾಯದ ಮೇಲೆ ಕ್ಲಬ್ಬಿಂಗ್ ನಿಯಮಗಳ ಅನುಸಾರ ಪತಿ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಯಾವೆಲ್ಲ ಸಂದರ್ಭದಲ್ಲಿ ಕ್ಲಬ್ಬಿಂಗ್ ನಿಯಮಗಳು ಅನ್ವಯಿಸುತ್ತವೋ ಅಂತಹ ಸಂದರ್ಭದಲ್ಲಿ ಅನ್ಯ ವ್ಯಕ್ತಿಯ ಹೆಸರಲ್ಲಿ ಕಡಿತಗೊಂಡ ಟಿಡಿಎಸ್ ಮೊತ್ತವೂ ತೆರಿಗೆ ಪಾವತಿಸುವವನ ಹೆಸರಿಗೆ ಫ಼ಾರಂ 37 ಬಿಎ ಸಲ್ಲಿಸುವುದರ ಮೂಲಕ ವರ್ಗಾಯಿಸಿಕೊಂಡು ನಿವ್ವಳ ತೆರಿಗೆಯನ್ನಷ್ಟೇ ತೆರಬೇಕಾದ ಸೌಲಭ್ಯ ಇರುತ್ತದೆ.

ಪಾರದರ್ಶಕ ತೆರಿಗೆ ವ್ಯವಹಾರದ ದೃಷ್ಟಿಯಿಂದ ಮೇಲಿನ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ಸೂಕ್ತ. ಹೊರನೋಟಕ್ಕೆ ತೆರಿಗೆ ಉಳಿಸುವ ಸರಳ ವಿಧಾನವನ್ನು ನಮ್ಮ ಸೀಮಿತ ಅರಿವಿನಿಂದ ಅಳವಡಿಸಿಕೊಂಡಿದ್ದರೂ, ಕಾನೂನು ತನ್ನದೇ ಚೌಕಟ್ಟಿನಲ್ಲಿ ಎಲ್ಲರೊಡನೆ ಸಮಾನವಾಗಿ ವ್ಯವಹರಿಸುತ್ತದೆ ಎನ್ನುವುದನ್ನು ಗಮನದಲ್ಲಿಟ್ಟು ನಮ್ಮ ನಿರ್ಧಾರಗಳನ್ನು ಕೈಗೊಳ್ಳಬೇಕು.

ಹೆಣ್ಣು ಮಕ್ಕಳ ಆದಾಯ

ಮದುವೆಯ ಮೊದಲು ಭಾವಿ ಪತಿ ಅಥವಾ ಪತ್ನಿ ಪರಸ್ಪರ ಕೊಡುಗೆಯಾಗಿ ಕೊಡುವ ಆಸ್ತಿಗಳ ಮೇಲೆ ಬರುವ ಆದಾಯಕ್ಕೆ ಕ್ಲಬ್ಬಿಂಗ್ ನಿಯಮಗಳು ಅನ್ವಯಿಸುವುದಿಲ್ಲ.

ಮದುವೆಯ ತರುವಾಯ ಅತ್ತೆ-ಮಾವ (ಪತಿಯ ತಂದೆ-ತಾಯಿ) ಸೊಸೆಯ ಹೆಸರಲ್ಲಿ ಆದಾಯ ತರುವ ಆಸ್ತಿಪಾಸ್ತಿಗಳನ್ನು ವರ್ಗಾಯಿಸಿದ ಸಂದರ್ಭದಲ್ಲಿ ಕ್ಲಬ್ಬಿಂಗ್ ನಿಯಮಗಳು ಅನ್ವಯಗೊಳ್ಳುತ್ತವೆ. ಹೀಗಾಗಿ ಯಾರು ಆದಾಯ ಗಳಿಸುತ್ತಾರೆ ಎಂಬುದಕ್ಕಿಂತ ಆಸ್ತಿಯನ್ನು ಯಾರು ವರ್ಗಾಯಿಸಿರುತ್ತಾರೋ ಅವರೇ ತೆರಿಗೆ ಪಾವತಿಸಬೇಕಾಗುತ್ತದೆ.

ವಿಚ್ಛೇದಿತ ಪತ್ನಿಯ ಆದಾಯ

ಪತಿ- ಪತ್ನಿಯ ಯಾವುದೇ ಆದಾಯವನ್ನು ಪರಸ್ಪರ ಸೇರಿಸಲು ಅವರ ವೈವಾಹಿಕ ಜೀವನ ಮುಂದುವರಿಯುತ್ತಿರಬೇಕು. ಯಾವುದೇ ಸಂದರ್ಭದಲ್ಲಿ ವಿಚ್ಚೇದನ ಹೊಂದಿದ್ದಲ್ಲಿ ಪತಿ-ಪತ್ನಿ ತಾವು ಹೊಂದಿರುವ ಆಸ್ತಿಗಳಿಂದ ಬರುವ ಆದಾಯದ ಮೇಲಿನ ತೆರಿಗೆಯನ್ನು ತಾವೇ ತೆರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.