ADVERTISEMENT

ಆದಾಯ ತೆರಿಗೆ ವಿನಾಯ್ತಿಯಲ್ಲಿ ಹೆಚ್ಚಳ ಸಾಧ್ಯತೆ

ಮುಂದಿನ ವರ್ಷದ ಬಜೆಟ್‌ನಲ್ಲಿ ಘೋಷಣೆ?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 8:20 IST
Last Updated 25 ಅಕ್ಟೋಬರ್ 2019, 8:20 IST
ಆದಾಯ ತೆರಿಗೆ
ಆದಾಯ ತೆರಿಗೆ   

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಹಲವು ರಿಯಾಯ್ತಿಗಳನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.

ತೆರಿಗೆ ಹಂತ ಮತ್ತು ವಿನಾಯ್ತಿಗಳು ಬದಲಾಗಲಿವೆ. ಸದ್ಯಕ್ಕೆ ಶೇ 30ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುವ ₹ 10 ಲಕ್ಷದವರೆಗಿನ ಆದಾಯದ ಗರಿಷ್ಠ ಮಿತಿ ಹೆಚ್ಚಿಸುವ ಸಾಧ್ಯತೆ ಇದೆ. ಇದರ ಜತೆಗೆ, ಮನೆ ಬಾಡಿಗೆ ಪಾವತಿ ಮತ್ತು ಬ್ಯಾಂಕ್‌ ಠೇವಣಿಯಿಂದ ಗಳಿಸುವ ಬಡ್ಡಿಗೂ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯೂ ಇದೆ.

ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉಪಕ್ರಮಗಳ ಅಂಗವಾಗಿ ಬಳಕೆದಾರರ ಬಳಿ ಹೆಚ್ಚು ಹಣ ಇರುವಂತೆ ಮಾಡಿ ಬೇಡಿಕೆ ಹೆಚ್ಚಳಗೊಳ್ಳಲು ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡುವುದು ಸರ್ಕಾರದ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಂದಿನ ವರ್ಷದ ಫೆಬ್ರುವರಿಯಲ್ಲಿ ಮಂಡಿಸಲಿರುವ 2020–21ನೆ ಹಣಕಾಸು ವರ್ಷದ ಬಜೆಟ್‌ನಲ್ಲಿ ಈ ತೆರಿಗೆ ಪ್ರಸ್ತಾವಗಳು ಇರಲಿವೆ.

ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಕಾರ್ಪೊರೇಟ್‌ ತೆರಿಗೆ (ಶೇ 22) ಕಡಿತದಿಂದ, ಶೇ 30ರಷ್ಟು ಆದಾಯ ತೆರಿಗೆ ಪಾವತಿಸುವವರಿಗಿಂತ ಕಂಪನಿಗಳು ಪಾವತಿಸುವ ತೆರಿಗೆ ಪ್ರಮಾಣ ಕಡಿಮೆ ಇರಲಿದೆ. ಈ ಕಾರಣಕ್ಕೆ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೂ ರಿಯಾಯ್ತಿ ನೀಡುವುದು ಸರ್ಕಾರದ ಆಲೋಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.