ADVERTISEMENT

ವಹಿವಾಟಿನ ವೇಳೆ ಪ್ಯಾನ್‌ ಉಲ್ಲೇಖ: ಮಿತಿ ಹೆಚ್ಚಳ

ಪಿಟಿಐ
Published 9 ಫೆಬ್ರುವರಿ 2026, 15:59 IST
Last Updated 9 ಫೆಬ್ರುವರಿ 2026, 15:59 IST
ಪ್ಯಾನ್‌ ಕಾರ್ಡ್‌
ಪ್ಯಾನ್‌ ಕಾರ್ಡ್‌   

ನವದೆಹಲಿ: ₹50 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವಾಗಲೆಲ್ಲ ಪ್ಯಾನ್‌ ಸಂಖ್ಯೆ ಉಲ್ಲೇಖಿಸುವ ಬದಲು, ವ್ಯಕ್ತಿಯೊಬ್ಬನ ಕಡೆಯಿಂದ ಆಗುವ ವಾರ್ಷಿಕ ಒಟ್ಟು ಜಮಾ ಮೊತ್ತ ಅಥವಾ ಹಣ ಹಿಂಪಡೆಯುವ ಮೊತ್ತವು ₹10 ಲಕ್ಷ ಮೀರಿದ್ದರೆ ಮಾತ್ರ ಪ್ಯಾನ್‌ ಉಲ್ಲೇಖ ಸಾಕು ಎಂದು ಆದಾಯ ತೆರಿಗೆ ಕರಡು ನಿಯಮಗಳಲ್ಲಿ ಹೇಳಲಾಗಿದೆ.

ಕ್ರಿಪ್ಟೊ ವಿನಿಮಯ ಕೇಂದ್ರಗಳು ತಮ್ಮಲ್ಲಿನ ಕೆಲವು ಮಾಹಿತಿಗಳನ್ನು ತೆರಿಗೆ ಇಲಾಖೆಯ ಜೊತೆ ಹಂಚಿಕೊಳ್ಳುವುದು ಕಡ್ಡಾಯ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಅಲ್ಲದೆ, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯು (ಸಿಬಿಡಿಸಿ) ಒಪ್ಪಿತ ಎಲೆಕ್ಟ್ರಾನಿಕ್‌ ಪಾವತಿ ವಿಧಾನಗಳಲ್ಲಿ ಒಂದು ಎಂದು ಅದು ಹೇಳಿದೆ.

ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಕ್ಲೇಮ್‌ಗಾಗಿ ‘ವರ್ಗ 1’ರ ವ್ಯಾಪ್ತಿಯ ಮಹಾನಗರಗಳ ಪಟ್ಟಿಗೆ ಬೆಂಗಳೂರು, ಪುಣೆ, ಅಹಮದಾಬಾದ್ ಮತ್ತು ಹೈದರಾಬಾದ್‌ ನಗರಗಳನ್ನು ಸೇರಿಸಲಾಗಿದೆ.

ADVERTISEMENT

ಕರಡು ನಿಯಮಗಳಿಗೆ ಬರುವ ಸಲಹೆಗಳನ್ನು ಸ್ವೀಕರಿಸಿದ ನಂತರದಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ನಿಯಮಗಳನ್ನು ಅಂತಿಮಗೊಳಿಸಲಿದೆ. ನಿಯಮಗಳನ್ನು ಮಾರ್ಚ್‌ ಮೊದಲ ವಾರದ ಹೊತ್ತಿಗೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಹೇಳಿದೆ.

‘ಆದಾಯ ತೆರಿಗೆ ಕಾಯ್ದೆ – 2025’ ಏಪ್ರಿಲ್‌ 1ರಿಂದ ಅನುಷ್ಠಾನಕ್ಕೆ ಬರುತ್ತಿದೆ. ಇದಕ್ಕಾಗಿ ಆದಾಯ ತೆರಿಗೆ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದೆ.

ಕರಡು ನಿಯಮಗಳ ಅನ್ವಯ, ದ್ವಿಚಕ್ರ ವಾಹನ ಸೇರಿದಂತೆ ₹5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಮೋಟಾರು ವಾಹನ ಖರೀದಿಸುವಾಗ ಪ್ಯಾನ್‌ ಉಲ್ಲೇಖಿಸುವುದು ಕಡ್ಡಾಯ ಆಗುತ್ತದೆ. ಆದರೆ ಈಗಿರುವ ನಿಯಮಗಳ ಪ್ರಕಾರ ದ್ವಿಚಕ್ರ ವಾಹನ ಖರೀದಿ ವೇಳೆ ಪ್ಯಾನ್‌ ಉಲ್ಲೇಖಿಸುವುದು ಕಡ್ಡಾಯ ಅಲ್ಲ.

ಹೋಟೆಲ್‌ ಅಥವಾ ರೆಸ್ಟಾರೆಂಟ್‌ ಬಿಲ್‌ ಮೊತ್ತ, ಸಭಾಭವನಗಳಿಗೆ ಅಥವಾ ಬ್ಯಾಂಕ್ವೆಟ್‌ ಹಾಲ್‌ಗಳಿಗೆ ಅಥವಾ ಕಾರ್ಯಕ್ರಮ ನಿರ್ವಹಣೆ ಮಾಡುವ ವ್ಯಕ್ತಿಗೆ ಮಾಡುವ ಪಾವತಿ ಮೊತ್ತ ₹1 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ಯಾನ್‌ ಸಂಖ್ಯೆ ನಮೂದು ಕಡ್ಡಾಯ ಆಗಲಿದೆ. ಈಗಿರುವ ನಿಯಮಗಳ ಪ್ರಕಾರ ಹೋಟೆಲ್‌ ಅಥವಾ ರೆಸ್ಟಾರೆಂಟ್‌ ಶುಲ್ಕವು ₹50 ಸಾವಿರಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆ ಉಲ್ಲೇಖಿಸಬೇಕಾಗುತ್ತದೆ.

ಕರಡು ನಿಯಮದಲ್ಲಿ ಉಲ್ಲೇಖ...

*ಯಾವುದೇ ಸ್ಥಿರ ಆಸ್ತಿಯ ಖರೀದಿ, ಮಾರಾಟ, ಉಡುಗೊರೆ ನೀಡುವಿಕೆ ಅಥವಾ ಅದರ ಜಂಟಿ ಅಭಿವೃದ್ಧಿ ಒಪ್ಪಂದದ ವಹಿವಾಟಿನ ಮೊತ್ತವು ₹20 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ಯಾನ್‌ ನಮೂದು ಕಡ್ಡಾಯವಾಗಲಿದೆ. ಈಗ ಈ ಮಿತಿ ₹10 ಲಕ್ಷ ಇದೆ

*ವಿಮಾ ಕಂಪನಿಯಲ್ಲಿ ಖಾತೆ ತೆರೆದು, ಆ ಕಂಪನಿಯ ಗ್ರಾಹಕ ಆಗಲು ಪ್ಯಾನ್‌ ಸಂಖ್ಯೆ ನಮೂದಿಸಬೇಕಾಗುತ್ತದೆ. ಈಗಿನ ನಿಯಮಗಳ ಪ್ರಕಾರ ವಾರ್ಷಿಕ ಜೀವ ವಿಮಾ ಪ್ರೀಮಿಯಂ ಮೊತ್ತವು ₹50 ಸಾವಿರಕ್ಕಿಂತ ಹೆಚ್ಚಿದ್ದರೆ ಮಾತ್ರ ಪ್ಯಾನ್‌ ಉಲ್ಲೇಖಿಸಬೇಕಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.