ADVERTISEMENT

ಆಮದು ಅಡಿಕೆ ಬೆಲೆ ಹೆಚ್ಚಿಸಿ: ಬೆಳೆಗಾರರ ನೆರವಿಗೆ ಆಗ್ರಹ

ಕೆಂಪಡಿಕೆ ಕ್ವಿಂಟಲ್‌ ದರ ₹ 28 ಸಾವಿರಕ್ಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 18:02 IST
Last Updated 9 ಆಗಸ್ಟ್ 2018, 18:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತೀವ್ರವಾಗಿ ಕುಸಿಯುತ್ತಿರುವ ಅಡಿಕೆ ದರ ನಿಯಂತ್ರಿಸುವ ನಿಟ್ಟಿನಲ್ಲಿ ಆಮದು ಅಡಿಕೆಯ ಕನಿಷ್ಠ ಖರೀದಿ ಬೆಲೆಯನ್ನು ಹೆಚ್ಚಿಸಬೇಕು ಎಂದು ರಾಜ್ಯದ ಅಡಿಕೆ ಬೆಳೆಗಾರರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಾಣಿಜ್ಯ ಸಚಿವ ಸುರೇಶ ಪ್ರಭು ಅವರಿಗೆ ಗುರುವಾರ ಈ ಕುರಿತ ಮನವಿ ಸಲ್ಲಿಸಿರುವ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್‌ ಮತ್ತು ಇಂಡೋನೇಷ್ಯಾದಿಂದ ಆಮದಾಗುತ್ತಿರುವ ಪ್ರತಿ ಕೆ.ಜಿ. ಅಡಿಕೆಯ ಬೆಲೆಯನ್ನು ₹ 251ರಿಂದ ₹ 300ಕ್ಕೆ ಹೆಚ್ಚಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಬೆಳೆಯಲಾಗುವ ಕೆಂಪಡಿಕೆಯ ದರ ಪ್ರತಿ ಕ್ವಿಂಟಲ್‌ಗೆ ₹ 38,000ರಿಂದ ₹ 28,000ಕ್ಕೆ ಕುಸಿದಿದೆ. ಕೆಲವು ದಿನಗಳ ಹಿಂದೆ ಆಮದು ಅಡಿಕೆಯ ಖರೀದಿ ದರವನ್ನು ಪ್ರತಿ ಕೆಜಿಗೆ ₹ 251ಕ್ಕೆ ಹೆಚ್ಚಿಸಿದ್ದರೂ, ಮೋಸದಿಂದ ಕಡಿಮೆ ದರಕ್ಕೇ ಖರೀದಿಸಲಾಗುತ್ತಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೆ ಕಾರಣವಾಗಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಹೆಚ್ಚಿನ ಪ್ರಮಾಣದ ಅಡಿಕೆಯನ್ನು ತಂಬಾಕುರಹಿತ ಪಾನ್‌ ಮಸಾಲಾ ತಯಾರಿಸಲು ಬಳಸಲಾಗುತ್ತಿದೆ. ಆದರೆ, ಈ ಅಡಿಕೆಗೆ ಕೇಂದ್ರ ಸರ್ಕಾರ ಶೇ 18ರಷ್ಟು ಜಿಎಸ್‌ಟಿ ಆಕರಿಸುತ್ತಿದ್ದು, ರೈತರಿಗೆ ಲಾಭಾಂಶ ಕಡಿಮೆಯಾಗುತ್ತಿದೆ. ಜಿಎಸ್‌ಟಿ ಪ್ರಮಾಣವನ್ನು
ಶೇ 5ಕ್ಕೆ ಇಳಿಸಲು ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್‌ ಶುಕ್ಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದರು.

‘ಆಮದು ಅಡಿಕೆಯ ಗುಣಮಟ್ಟ ಕಳಪೆಯಾಗಿರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ರಾಜ್ಯದಲ್ಲಿ ಬೆಳೆದ ಅಡಿಕೆ ತಿಂದು ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಅಡಿಕೆಯ ಗುಣಮಟ್ಟ ನಿರ್ಧರಿಸುವ ಮಾನದಂಡ ರೂಪಿಸಿದಲ್ಲಿ ರಾಜ್ಯದಲ್ಲಿ ವಾರ್ಷಿಕ ಅಂದಾಜು 3.50 ಲಕ್ಷ ಟನ್‌ ಅಡಿಕೆ ಬೆಳೆಗಾರರಿಗೆ ನೆರವಾಗಲಿದೆ ಎಂದು ಕೇಂದ್ರದ ಕೃಷಿ ಸಚಿವ ರಾಧಾಮೋಹನ ಸಿಂಗ್‌ ಅವರಿಗೆ ಅಡಿಕೆ ಬೆಳೆಗಾರರ ಪರವಾಗಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.