ADVERTISEMENT

ಭಾರತ–ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದದಿಂದ ತಯಾರಿಕೆಗೆ ಉತ್ತೇಜನ: ಮೂಡಿಸ್‌

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದದ ಕುರಿತು ರೇಟಿಂಗ್ಸ್‌ ಸಂಸ್ಥೆ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 16:05 IST
Last Updated 28 ಜನವರಿ 2026, 16:05 IST
ಮೂಡಿಸ್‌
ಮೂಡಿಸ್‌   

ನವದೆಹಲಿ (ಪಿಟಿಐ): ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಭಾರತಕ್ಕೆ ಹೆಚ್ಚಿನ ವಿದೇಶಿ ಹೂಡಿಕೆ ತರಲು ನೆರವಾಗಲಿದೆ, ಭಾರತದ ತಯಾರಿಕಾ ವಲಯಕ್ಕೆ ಬಲ ನೀಡಲಿದೆ, ಭಾರತದ ಕೆಲವು ವಲಯಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚು ಮಾಡಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಮೂಡಿಸ್‌ ಹೇಳಿದೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಭಾರತ ಮತ್ತು ಐರೋಪ್ಯ ಒಕ್ಕೂಟ ಮಂಗಳವಾರ ಘೋಷಿಸಿವೆ. ಈ ಒಪ್ಪಂದ ಜಾರಿಗೆ ಬಂದ ನಂತರದಲ್ಲಿ ಭಾರತದ ಶೇ 93ರಷ್ಟು ಸರಕುಗಳು ಇ.ಯು ದೇಶಗಳ ಮಾರುಕಟ್ಟೆಯನ್ನು ಸುಂಕರಹಿತವಾಗಿ ಪ್ರವೇಶಿಸಲಿವೆ.

ಈ ಒಪ್ಪಂದವು 200 ಕೋಟಿ ಜನರ ಮಾರುಕಟ್ಟೆಯೊಂದನ್ನು ಸೃಷ್ಟಿಸಲಿದೆ. ಭಾರತವು ತನ್ನ ವ್ಯಾಪಾರ ಸಂಬಂಧವನ್ನು ವೈವಿಧ್ಯಮಯ ಆಗಿಸಲು ನಿರಂತರ ಪ್ರಯತ್ನ ನಡೆಸಿದೆ ಎಂಬುದನ್ನು ಈ ಮಾತುಕತೆ ‍ಪೂರ್ಣಗೊಂಡಿರುವುದು ಹೇಳುತ್ತಿದೆ ಎಂದು ಕೂಡ ಮೂಡಿಸ್‌ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.

ADVERTISEMENT

‘ಯುರೋಪಿನ ಕಾರು ತಯಾರಿಕಾ ಕಂಪನಿಗಳು ಜಗತ್ತಿನ ಮೂರನೆಯ ಅತಿದೊಡ್ಡ ಕಾರು ಮಾರುಕಟ್ಟೆಗೆ ಹೆಚ್ಚು ಸುಲಭವಾಗಿ ಪ್ರವೇಶ ಪಡೆಯಲಿವೆ. ಇದರಿಂದಾಗಿ ಆ ಕಂಪನಿಗಳಿಗೆ ಇನ್ನಷ್ಟು ಹೆಚ್ಚಿನ ಗುಣಮಟ್ಟದ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ... ಆದರೆ ಇದರಿಂದ ಭಾರತದ ಕಾರು ತಯಾರಿಕಾ ಕಂಪನಿಗಳಿಗೆ ಹೆಚ್ಚು ಸ್ಪರ್ಧೆ ಎದುರಾಗಲಿದೆ’ ಎಂದು ಮೂಡಿಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.