ನವದೆಹಲಿ: 2024–25ರ ಮಾರುಕಟ್ಟೆ ವರ್ಷದ (ಅಕ್ಟೋಬರ್–ಸೆಪ್ಟೆಂಬರ್) ಏಪ್ರಿಲ್ 30ರ ವರೆಗೆ 4.24 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ (ಎಐಎಸ್‌ಟಿಎ) ಸೋಮವಾರ ತಿಳಿಸಿದೆ.
ಈ ಪೈಕಿ 3.27 ಲಕ್ಷ ಟನ್ ಬಿಳಿ ಸಕ್ಕರೆ ರಫ್ತಾಗಿದೆ. ಸಂಸ್ಕರಿಸಿದ ಸಕ್ಕರೆ 77,603 ಟನ್ ಮತ್ತು 18,514 ಟನ್ ಕಚ್ಚಾ ಸಕ್ಕರೆ ರಫ್ತಾಗಿದೆ.
ಒಟ್ಟು ರಫ್ತಿನ ಪೈಕಿ ಸೊಮಾಲಿಯಾಗೆ ಗರಿಷ್ಠ 92,758 ಟನ್ ರವಾನಿಸಲಾಗಿದೆ. ಅಫ್ಗಾನಿಸ್ತಾನ 66,927 ಟನ್, ಶ್ರೀಲಂಕಾ 60,357 ಟನ್ ಮತ್ತು ದಿಬೌತಿಗೆ 47,100 ಟನ್‌ನಷ್ಟು ರಫ್ತಾಗಿದೆ ಎಂದು ತಿಳಿಸಿದೆ.
ಪ್ರಸಕ್ತ ಮಾರುಕಟ್ಟೆ ಋತುವಿನಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಆದರೆ, 8 ಲಕ್ಷ ಟನ್‌ನಷ್ಟು ರಫ್ತಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
2025-26ರ ಋತುವಿನಲ್ಲಿ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಲ್ಲಿನ ಏರಿಕೆಗೆ ಅನುಗುಣವಾಗಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಬೇಕು. ಜೊತೆಗೆ ಎಥೆನಾಲ್ ಖರೀದಿ ದರವನ್ನು ಶೇ 10ರಷ್ಟು ಏರಿಕೆ ಮಾಡುವಂತೆ ಸರ್ಕಾರವನ್ನು ಎಐಎಸ್‌ಟಿಎ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.