
ನವದೆಹಲಿ: ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಸಾಲಿನಲ್ಲಿ ಭಾರತವು ಡಿಸೆಂಬರ್‌ನಲ್ಲಿ ಮೂರನೆಯ ಸ್ಥಾನಕ್ಕೆ ಇಳಿದಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್‌ಇಎ) ಹೇಳಿದೆ.
ಸಿಆರ್‌ಇಎ ಅಂದಾಜಿನ ಪ್ರಕಾರ ಡಿಸೆಂಬರ್‌ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲ, ಕಲ್ಲಿದ್ದಲಿನ ಮೊತ್ತವು 2.3 ಬಿಲಿಯನ್ ಯೂರೊ (ಸರಿಸುಮಾರು ₹24 ಸಾವಿರ ಕೋಟಿ) ಆಗಿದೆ. ನವೆಂಬರ್ ತಿಂಗಳಲ್ಲಿ ಇದು 3.3 ಬಿಲಿಯನ್ ಯೂರೊ (ಸರಿಸುಮಾರು ₹34 ಸಾವಿರ ಕೋಟಿ) ಆಗಿತ್ತು.
ಎರಡನೆಯ ಸ್ಥಾನಕ್ಕೆ ಟರ್ಕಿ ದೇಶ ಬಂದಿದೆ ಎಂದು ಅದು ಹೇಳಿದೆ. ಮೊದಲ ಸ್ಥಾನದಲ್ಲಿ ಚೀನಾ ಮುಂದುವರಿದಿದೆ.
ಅಮೆರಿಕವು ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಇವೆರಡು ರಷ್ಯಾದ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಗಳಾಗಿವೆ. ಈ ನಿರ್ಬಂಧದ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್‌ಪಿಸಿಎಲ್–ಮಿತ್ತಲ್ ಎನರ್ಜಿ ಲಿ. ಮತ್ತು ಎಂಆರ್‌ಪಿಎಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲ ಆಮದುಮಾಡಿಕೊಳ್ಳುವುದನ್ನು ಒಂದೋ ನಿಲ್ಲಿಸಿವೆ ಅಥವಾ ಆಮದು ಪ್ರಮಾಣವನ್ನು ತಗ್ಗಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.