ನವದೆಹಲಿg: ‘ದೇಶದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 6.5ಕ್ಕೂ ಹೆಚ್ಚು ಇರಲಿದೆ’ ಎಂದು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸದಸ್ಯ ನಾಗೇಶ್ ಕುಮಾರ್ ಭಾನುವಾರ ಹೇಳಿದ್ದಾರೆ.
ಜಗತ್ತಿನ ಎಲ್ಲ ಆರ್ಥಿಕತೆಗಿಂತ ಭಾರತದ ಆರ್ಥಿಕತೆಯು ಉಜ್ವಲವಾಗಿದೆ. ಜಗತ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ರಾಷ್ಟ್ರಗಳು ಸಾಲದ ಬಿಕ್ಕಟ್ಟಿನಲ್ಲಿವೆ. ಹೆಚ್ಚಿನ ಹಣದುಬ್ಬರ, ಆರ್ಥಿಕತೆಯ ಮಂದಗತಿಯನ್ನು ಎದುರಿಸುತ್ತಿವೆ. ಆದರೆ, ಭಾರತದ ಆರ್ಥಿಕತೆಯು ನಿರಂತರವಾಗಿ ಬೆಳವಣಿಗೆ ಕಾಣುತ್ತಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಸಕ್ತ ಮತ್ತು ಮುಂದಿನ ಆರ್ಥಿಕ ವರ್ಷದಲ್ಲಿ ದೇಶವು ಶೇ 6.5ಕ್ಕೂ ಹೆಚ್ಚು ಬೆಳವಣಿಗೆಯನ್ನು ಸಾಧಿಸುವಲ್ಲಿ ಯಾವುದೇ ಸವಾಲುಗಳು ಕಾಣುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಆರ್ಥಿಕತೆಯು ಶೇ 7ರಿಂದ ಶೇ 7.5ರಷ್ಟು ಬೆಳವಣಿಗೆ ಆಗಲಿದೆ ಎಂದರು.
ಹಣದುಬ್ಬರ ಇಳಿಯುತ್ತಿದೆ. ಆರ್‌ಬಿಐ ರೆಪೊ ದರ ಮತ್ತೆ ಕಡಿತ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಶ್, ವಿವಿಧ ಮಾನದಂಡಗಳ ಆಧಾರದ ಮೇಲೆ ರೆಪೊ ದರ ನಿರ್ಣಯಿಸಲಾಗುತ್ತದೆ. ಹಣದುಬ್ಬರದ ದತ್ತಾಂಶವೊಂದೇ ಮಾನದಂಡವಲ್ಲ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಆರ್‌ಬಿಐನ ಎಂಪಿಸಿ ಸಭೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.