ನವದೆಹಲಿ: ‘ವಿಕಸಿತ ಭಾರತ – 2047’ರ ಭಾಗವಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುವ ಸಾಮರ್ಥ್ಯ ಇರುವ ಎರಡು ಬ್ಯಾಂಕ್‌ಗಳ ಸ್ಥಾಪನೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬ್ಯಾಂಕ್‌ಗಳು ಆಸ್ತಿಯ ಲೆಕ್ಕದಲ್ಲಿ ಜಾಗತಿಕ ಮಟ್ಟದಲ್ಲಿ 20 ಮುಂಚೂಣಿ ಬ್ಯಾಂಕ್‌ಗಳ ಪೈಕಿ ಒಂದಾಗಬೇಕು ಎಂಬ ಗುರಿಯನ್ನು ಕೂಡ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.
ಹಣಕಾಸು ಸೇವೆಗಳ ಇಲಾಖೆಯು ನವದೆಹಲಿಯಲ್ಲಿ ಆಯೋಜಿಸಿದ್ದ ‘ಪಿಎಸ್‌ಬಿ ಮಂಥನ್ – 2025’ರಲ್ಲಿ ಈ ಕುರಿತಾಗಿ ಚರ್ಚೆ ನಡೆದಿದೆ. ಈಗ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಜಾಗತಿಕ ಮಟ್ಟದಲ್ಲಿ 43ನೇ ಸ್ಥಾನದಲ್ಲಿದೆ. ಖಾಸಗಿ ಸ್ವಾಮ್ಯದ ಎಚ್‌ಡಿಎಫ್‌ಸಿ ಬ್ಯಾಂಕ್ ಜಾಗತಿಕ ಮಟ್ಟದಲ್ಲಿ 73ನೇ ಸ್ಥಾನದಲ್ಲಿದೆ.
ಕನಿಷ್ಠ ಎರಡು ಬ್ಯಾಂಕ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವಂತೆ ಮಾಡುವುದು ಹೇಗೆ, ಅದರಲ್ಲೂ ಮುಖ್ಯವಾಗಿ ಯಾವುದೇ ಸ್ವಾಧೀನ ಪ್ರಕ್ರಿಯೆಗೆ ಮುಂದಾಗದೆ ಬ್ಯಾಂಕ್‌ಗಳನ್ನು ಆ ಮಟ್ಟಕ್ಕೆ ಬೆಳೆಸುವುದು ಹೇಗೆ ಎಂಬ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನದ ಬಗ್ಗೆ ಚರ್ಚೆ ಆಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ ಮತ್ತು ಪಿಎನ್‌ಬಿ ಸಿಇಒ ಅಶೋಕ್ ಚಂದ್ರ ಅವರೂ ಸಭೆಯಲ್ಲಿ ಇದ್ದರು.
2047ಕ್ಕೆ ಮೊದಲು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವ ಗುರಿಯನ್ನು ಗಮನದಲ್ಲಿ ಇರಿಸಿಕೊಂಡು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಮುಂದಿನ ಹಂತದ ಬೆಳವಣಿಗೆಗೆ ಸಜ್ಜುಗೊಳಿಸುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿದೆ.
2024–25ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಲಾಭವು ₹1.78 ಲಕ್ಷ ಕೋಟಿಯ ದಾಖಲೆ ಮಟ್ಟಕ್ಕೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಇದು ಹಿಂದಿನ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಂಡಿದ್ದ ಲಾಭಕ್ಕೆ (₹ 1.41 ಲಕ್ಷ ಕೋಟಿ) ಹೋಲಿಸಿದರೆ ಶೇಕಡ 26ರಷ್ಟು ಹೆಚ್ಚು.
ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ರಚನೆಯಲ್ಲಿ ಇನ್ನಷ್ಟು ಸುಧಾರಣೆ ತಂದು, ಅವು ವಾಣಿಜ್ಯ ತೀರ್ಮಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವಂತೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.