ADVERTISEMENT

ಚಿನ್ನ ಉತ್ಪಾದನೆ ಹೆಚ್ಚಳ ಸಾಧ್ಯ: ಡಬ್ಲ್ಯುಜಿಸಿ

ಅಧಿಕಾರಶಾಹಿ ಅಡೆತಡೆ ನಿವಾರಣೆ, ಹೂಡಿಕೆಗೆ ಉತ್ತೇಜನ ಅಗತ್ಯ

ರಾಯಿಟರ್ಸ್
Published 17 ಮಾರ್ಚ್ 2022, 11:36 IST
Last Updated 17 ಮಾರ್ಚ್ 2022, 11:36 IST
   

ಮುಂಬೈ: ಭಾರತದಲ್ಲಿ ಚಿನ್ನ ಉದ್ಯಮದಲ್ಲಿ ಹೂಡಿಕೆಗೆ ಉತ್ತೇಜನ ನೀಡಿದಲ್ಲಿ, ಅಧಿಕಾರಿಗಳ ಮಟ್ಟದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿದಲ್ಲಿ ವಾರ್ಷಿಕ ಚಿನ್ನ ಉತ್ಪಾದನೆಯು ಈಗಿರುವ 1.6 ಟನ್‌ಗಳಿಂದ 20 ಟನ್‌ಗಳಿಗೆ ಹೆಚ್ಚಾಗಲಿದೆ ಎಂದು ವಿಶ್ವ ಚಿನ್ನ ಸಮಿತಿಯು (ಡಬ್ಲ್ಯುಜಿಸಿ) ತನ್ನ ವರದಿಯಲ್ಲಿ ಹೇಳಿದೆ.

ಚಿನ್ನ ಬಳಕೆಯಲ್ಲಿ ಜಗತ್ತಿನಲ್ಲಿ ಎರಡನೆಯ ಸ್ಥಾನದಲ್ಲಿರುವ ಭಾರತವು ತನ್ನ ಬೇಡಿಕೆಯ ಬಹುಪಾಲನ್ನು ಆಮದು ಮೂಲಕವೇ ಪೂರೈಸಿಕೊಳ್ಳುತ್ತಿದೆ. ದೇಶದಲ್ಲಿ ಉತ್ಪಾದನೆ ಹೆಚ್ಚಾದರೆ ಆಮದು ಪ್ರಮಾಣವನ್ನು ತಗ್ಗಿಸಬಹುದಾಗಿದೆ. 2021ರಲ್ಲಿ 1,050 ಟನ್‌ ಚಿನ್ನ ಆಮದು ಮಾಡಿಕೊಳ್ಳಲು ₹ 4.23 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. 2020ರಲ್ಲಿ 430 ಟನ್‌ ಆಮದಾಗಿತ್ತು.

ಭಾರತದಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆಯಲು ದೀರ್ಘ ಪ್ರಕ್ರಿಯೆ ಅನುಸರಿಸಬೇಕು. ಹಲವು ಸಂಸ್ಥೆಗಳ ಒಪ್ಪಿಗೆ ಪಡೆಯಬೇಕು. ಈ ಕಾರಣಗಳಿಂದಾಗಿ ಮುಖ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಯಿಂದ ಹಿಂದೆ ಸರಿಯುತ್ತಿವೆ ಎಂದು ಸಮಿತಿಯು ತಿಳಿಸಿದೆ.

ADVERTISEMENT

ಬಹುತೇಕ ಚಿನ್ನದ ಗಣಿಗಳು ಇರುವ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಸರಿಯಾಗಿಲ್ಲ. ಇದರಿಂದಾಗಿ ಸರಕು ಸಾಗಣೆ ಕಷ್ಟವಾಗುವುದಷ್ಟೇ ಅಲ್ಲದೆ ದುಬಾರಿಯೂ ಆಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಇರುವ ಹಟ್ಟಿ ಚಿನ್ನದ ಗಣಿಯಲ್ಲಿ ಸದ್ಯ ನಾಲ್ಕು ಸಾವಿರಕ್ಕೂ ಅಧಿಕ ಕೆಲಸಗಾರರು ಮತ್ತು ಗುತ್ತಿಗೆ ನೌಕರರು ಇದ್ದಾರೆ. ಭಾರತದಲ್ಲಿ ಉತ್ಪಾದನೆ ಆಗುವ ಚಿನ್ನದಲ್ಲಿ ಬಹುಪಾಲು ಇಲ್ಲೇ ಉತ್ಪಾದನೆ ಆಗುತ್ತಿದೆ.

ಚಿನ್ನದ ಗಣಿಗಾರಿಕೆಯು ಇನ್ನೂ 3 ಸಾವಿರದಿಂದ 4 ಸಾವಿರ ಜನರಿಗೆ ಉದ್ಯೋಗ ನೀಡಬಹುದಾಗಿದೆ. ಆದರೆ, ಇದಕ್ಕೆ ₹ 7,600 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯ ಇದೆ ಎಂದು ಡಬ್ಲ್ಯುಜಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.