ADVERTISEMENT

ಮುಕ್ತ ಇ–ವಾಣಿಜ್ಯ ಜಾಲಕ್ಕೆ ಪ್ರಾಯೋಗಿಕ ಚಾಲನೆ

ಪಿಟಿಐ
Published 29 ಏಪ್ರಿಲ್ 2022, 16:48 IST
Last Updated 29 ಏಪ್ರಿಲ್ 2022, 16:48 IST

ನವದೆಹಲಿ (ಪಿಟಿಐ): ಡಿಜಿಟಲ್‌ ವಾಣಿಜ್ಯ ವಹಿವಾಟಿಗಾಗಿ ಮುಕ್ತ ನೆಟ್‌ವರ್ಕ್‌ (ಒಎನ್‌ಡಿಸಿ) ಹೆಸರಿನ ಯೋಜನೆಯ ಪ್ರಾಯೋಗಿಕ ಹಂತಕ್ಕೆ ಐದು ನಗರಗಳಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಇದು ಇ–ವಾಣಿಜ್ಯ ಸೌಲಭ್ಯವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿರೀಕ್ಷೆ ಇದೆ. ಆನ್‌ಲೈನ್ ಚಿಲ್ಲರೆ ವಹಿವಾಟಿನಲ್ಲಿ ದೈತ್ಯ ಕಂಪನಿಗಳ ಪ್ರಭಾವವನ್ನು ತಗ್ಗಿಸಿ, ಸಣ್ಣ ವ್ಯಾಪಾರಿಗಳಿಗೆ ಕೂಡ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಒಎನ್‌ಡಿಸಿಗೆ ಚಾಲನೆ ದೊರೆತ ಸುದ್ದಿಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ದೇಶದ ಇ–ವಾಣಿಜ್ಯ ವಹಿವಾಟಿನಲ್ಲಿ ಎರಡು ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯ ತಗ್ಗಿಸುವ ಉದ್ದೇಶವನ್ನು ಕೂಡ ಇದು ಹೊಂದಿದೆ.

ಒಎನ್‌ಡಿಸಿ ಎಂಬುದು ಮಾರಾಟಗಾರಿಗೆ, ಸರಕು ಸಾಗಣೆ ಸೌಲಭ್ಯ ಒದಗಿಸುವವರಿಗೆ ಹಾಗೂ ಪಾವತಿ ಗೇಟ್‌ವೇಗಳಿಗೆ ಕೆಲವು ಮಾನದಂಡಗಳನ್ನು ರೂಪಿಸಿದೆ. ಇದನ್ನು ಅವರು ಸ್ವ–ಇಚ್ಛೆಯಿಂದ ಒಪ್ಪಿಕೊಳ್ಳಬಹುದು ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.

ADVERTISEMENT

ಈಗ 80 ಕಂಪನಿಗಳು ಒಎನ್‌ಡಿಸಿ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಈ ಕಂಪನಿಗಳು ಉತ್ಪನ್ನಗಳ ಮಾರಾಟಗಾರರಿಗೆ, ಸರಕು ಸಾಗಣೆದಾರರಿಗೆ ಮತ್ತು ಪಾವತಿ ಗೇಟ್‌ವೇ ಕಂಪನಿಗಳಿಗಾಗಿ ಆ್ಯಪ್‌ ಅಭಿವೃದ್ಧಿಪಡಿಸುತ್ತಿವೆ. ಪ್ರಾಯೋಗಿಕ ಹಂತದಲ್ಲಿ ಬೆಂಗಳೂರು, ದೆಹಲಿ, ಭೋಪಾಲ್, ಶಿಲ್ಲಾಂಗ್ ಮತ್ತು ಕೊಯಮತ್ತೂರು ನಗರಗಳಲ್ಲಿ ಒಟ್ಟು 150 ಸಣ್ಣ ವ್ಯಾಪಾರಿಗಳನ್ನು ಒಳಗೊಳ್ಳುವ ಉದ್ದೇಶ ಹೊಂದಲಾಗಿದೆ.

ಮುಂದಿನ ದಿನಗಳಲ್ಲಿ ಒಎನ್‌ಡಿಸಿ ವೇದಿಕೆಯು ಒಟ್ಟು ಮೂರು ಕೋಟಿ ವ್ಯಾಪಾರಿಗಳನ್ನು ತನ್ನ ಜೊತೆ ಸೇರಿಸಿಕೊಳ್ಳುವ ಗುರಿ ಹೊಂದಿದೆ. ಅಲ್ಲದೆ, ಒಟ್ಟು 100 ನಗರಗಳಿಗೆ ವಿಸ್ತರಣೆ ಹೊಂದುವ ಗುರಿಯನ್ನೂ ಇರಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.