ADVERTISEMENT

ಭಾರತ –ಒಮನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಶೀಘ್ರ

ಪಿಟಿಐ
Published 9 ಆಗಸ್ಟ್ 2025, 14:59 IST
Last Updated 9 ಆಗಸ್ಟ್ 2025, 14:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತ ಮತ್ತು ಒಮಾನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಶೀಘ್ರವೇ ಸಹಿ ಬೀಳುವ ನಿರೀಕ್ಷೆ ಇದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ವ್ಯಾಪಾರ ಒಪ್ಪಂದದ ದಾಖಲೆಗಳನ್ನು ಒಮಾನ್‌ನಲ್ಲಿ ಅರೇಬಿಕ್ ಭಾಷೆಗೆ ಅನುವಾದ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎರಡೂ ದೇಶಗಳ ಸಚಿವ ಸಂಪುಟವು ಒಪ್ಪಂದಕ್ಕೆ ಅನುಮೋದನೆ ನೀಡಬೇಕಿದೆ ಎಂದು ತಿಳಿಸಿವೆ. 

ಒಪ್ಪಂದ ಘೋಷಣೆಗೆ ಎರಡರಿಂದ ಮೂರು ತಿಂಗಳು ಬೇಕಾಗಬಹುದೇ ಎಂಬ ಪ‍್ರಶ್ನೆಗೆ ಉತ್ತರಿಸಿದ ಮೂಲಗಳು, ‘ಅದಕ್ಕಿಂತಲೂ ಕಡಿಮೆ ಸಮಯ ಸಾಕು’ ಎಂದಿವೆ. 2023ರ ನವೆಂಬರ್‌ನಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಮಾತುಕತೆಗಳು ಆರಂಭವಾಗಿದ್ದವು.

ADVERTISEMENT

ಒಪ್ಪಂದವು ಜಾರಿಗೊಂಡರೆ ಈ ಎರಡೂ ವ್ಯಾಪಾರ ಪಾಲುದಾರ ದೇಶಗಳ ನಡುವಿನ ಬಹುತೇಕ ಸರಕುಗಳ ಮೇಲಿನ ಸೀಮಾ ಸುಂಕವು ಕಡಿಮೆ ಆಗಲಿದೆ ಅಥವಾ ರದ್ದಾಗಲಿದೆ. ಅಲ್ಲದೆ, ನಿಯಮಗಳನ್ನು ಸರಳಗೊಳಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಲಿದೆ ಮತ್ತು ಹೂಡಿಕೆಯನ್ನು ಆಕರ್ಷಿಸಲಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೌಲ್ಯ ₹87,578 ಕೋಟಿ ಆಗಿದೆ. 

ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಯೂರಿಯಾ ಭಾರತವು ಒಮಾನ್‌ನಿಂದ ಆಮದು ಮಾಡಿಕೊಳ್ಳುವ ಪ್ರಮುಖ ಉತ್ಪನ್ನಗಳಾಗಿದ್ದು, ಒಟ್ಟು ಆಮದಿನಲ್ಲಿ ಶೇ 70ರಷ್ಟು ಪಾಲನ್ನು ಹೊಂದಿವೆ. ಪ್ರೊಪಿಲೀನ್, ಎಥಿಲೀನ್‌ ಪಾಲಿಮರ್ಸ್, ಪೆಟ್ರೋಲಿಯಂ ಕೋಕ್, ಜಿಪ್ಸಂ, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕನ್ನು ಆಮದು ಮಾಡಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.