ADVERTISEMENT

ಪರ್ಯಾಯ ಮೂಲದಿಂದ ತೈಲ: ಕೇಂದ್ರದ ವಿಶ್ವಾಸ

ಪಿಟಿಐ
Published 17 ಜುಲೈ 2025, 15:24 IST
Last Updated 17 ಜುಲೈ 2025, 15:24 IST
ಹರದೀಪ್ ಸಿಂಗ್ ಪುರಿ –ಪಿಟಿಐ ಚಿತ್ರ
ಹರದೀಪ್ ಸಿಂಗ್ ಪುರಿ –ಪಿಟಿಐ ಚಿತ್ರ   

ನವದೆಹಲಿ: ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕವು ಎಚ್ಚರಿಕೆ ನೀಡಿರುವ ನಡುವೆಯೇ ಕೇಂದ್ರ ಸರ್ಕಾರವು ‘ಪರ್ಯಾಯ ಮೂಲಗಳಿಂದ ತೈಲ ಖರೀದಿಸುವ ವಿಶ್ವಾಸ ತನಗೆ ಇದೆ’ ಎಂದು ಹೇಳಿದೆ.

ಭಾರತವು ತನ್ನ ಅಗತ್ಯದ ಶೇಕಡ 85ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತದೆ. ಭಾರತವು ಮೊದಲಿನಿಂದಲೂ ಪಶ್ಚಿಮ ಏಷ್ಯಾದ ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಳೆದ ಮೂರು ವರ್ಷಗಳಿಂದ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲಾಗುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರದಲ್ಲಿ ಯುರೋಪಿನ ಹಲವು ದೇಶಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿದವು. ಆಗ ರಷ್ಯಾ ಹೊಸ ಗ್ರಾಹಕರನ್ನು ಹುಡುಕಿಕೊಳ್ಳುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸಲು ಆರಂಭಿಸಿತು.

ADVERTISEMENT

ಅವಕಾಶವನ್ನು ಬಳಸಿಕೊಂಡ ಭಾರತದ ಕಂಪನಿಗಳು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಖರೀದಿಸಲು ಆರಂಭಿಸಿದವು. ಈಗ ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟು ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ 40ರಷ್ಟಿದೆ.

ಕಾರ್ಯಕ್ರಮವೊಂದರಲ್ಲಿ ಗುರುವಾರ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರು, ‘ಗಯಾನಾದಂತಹ ಹೊಸ ಪೂರೈಕೆದಾರ ದೇಶಗಳು ಕಚ್ಚಾ ತೈಲ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಅಲ್ಲದೆ, ಬ್ರೆಜಿಲ್‌ ಹಾಗೂ ಕೆನಡಾದಂತಹ ಹಾಲಿ ಪೂರೈಕೆದಾರರಿಂದ ಖರೀದಿಯನ್ನು ಹೆಚ್ಚಿಸಬಹುದು’ ಎಂದರು.

‘ನಾನು ಯಾವುದೇ ಒತ್ತಡ ಎದುರಿಸುತ್ತಿಲ್ಲ. ಭಾರತವು ತೈಲ ಖರೀದಿಯ ಮೂಲಗಳನ್ನು ಹೆಚ್ಚು ಮಾಡಿಕೊಂಡಿದೆ. ಮೊದಲು 27 ದೇಶಗಳಿಂದ ಕಚ್ಚಾ ತೈಲ ಖರೀದಿಸಲಾಗುತ್ತಿತ್ತು, ಈಗ 40 ದೇಶಗಳಿಂದ ಖರೀದಿಸಲಾಗುತ್ತಿದೆ’ ಎಂದು ಅವರು ಅಮೆರಿಕದ ಎಚ್ಚರಿಕೆ ಕುರಿತ ಪ್ರಶ್ನೆಗೆ ಉತ್ತರವಾಗಿ ಹೇಳಿದರು.

ಉಕ್ರೇನ್ ಜೊತೆ 50 ದಿನಗಳಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ರಷ್ಯಾ ವಿಫಲವಾದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಕೂಡ ಅಮೆರಿಕವು ನಿರ್ಬಂಧ ಹೇರಬಹುದು ಅಥವಾ ಆ ದೇಶಗಳ ಮೇಲೆ ಭಾರಿ ತೆರಿಗೆ ವಿಧಿಸಬಹುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಈಚೆಗೆ ಹೇಳಿದ್ದರು.

ಭಾರತದಲ್ಲಿಯೇ ತೈಲ ನಿಕ್ಷೇಪ ಇದೆಯೇ ಎಂಬುದರ ಹುಡುಕಾಟವನ್ನು ಹೆಚ್ಚು ಮಾಡಲಾಗಿದೆ ಎಂದು ಕೂಡ ಪುರಿ ತಿಳಿಸಿದರು.

ಬೆಲೆ ವ್ಯತ್ಯಾಸ ಆಗುತ್ತಿಲ್ಲ: ಪುರಿ

ಜಾಗತಿಕ ಗೊಂದಲಗಳಿಗೆ ಕಚ್ಚಾ ತೈಲ ಮಾರುಕಟ್ಟೆಯು ಈಗ ಮೊದಲಿನಂತೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಚಿವ ಪುರಿ ಅವರು ಸುದ್ದಿಗಾರರಿಗೆ ತಿಳಿಸಿದರು. ಅದರಲ್ಲೂ ಮುಖ್ಯವಾಗಿ ತೈಲದ ಲಭ್ಯತೆ ಹೆಚ್ಚು ಇರುವಾಗ ಗೊಂದಲಗಳಿಗೆ ಪ್ರತಿಕ್ರಿಯೆಯಾಗಿ ಬೆಲೆಯು ಮೊದಲಿನಷ್ಟು ವ್ಯತ್ಯಾಸ ಆಗುತ್ತಿಲ್ಲ ಎಂದರು. ಕಚ್ಚಾ ತೈಲದ ಬೆಲೆಯು ಈಗ ಬ್ಯಾರೆಲ್‌ಗೆ 68.5 ಡಾಲರ್‌ನಷ್ಟು ಇದೆ. ಬೆಲೆಯು ಮುಂದಿನ ತಿಂಗಳುಗಳಲ್ಲಿಯೂ ಇದೇ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ. ಬೆಲೆಯು ಬ್ಯಾರೆಲ್‌ಗೆ 65 ಡಾಲರ್ ಆಗಬಹುದು ಎಂದು ಅವರು ಹೇಳಿದರು. ಇಂಧನದಲ್ಲಿ ಎಥೆನಾಲ್‌ ಮಿಶ್ರಣವನ್ನು ಈಗಿನ ಶೇ 20ಕ್ಕಿಂತ ಹೆಚ್ಚು ಮಾಡುವ ಬಗ್ಗೆ ನೀತಿ ಆಯೋಗದ ನೇತೃತ್ವದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.