ADVERTISEMENT

ತೈಲ ಆಮದಿಗೆ ಪರ್ಯಾಯ ಮಾರ್ಗ

ಭಾರತದಲ್ಲಿ ತೈಲ ಪೂರೈಕೆಗೆ ಸಮಸ್ಯೆ ಆಗದು; ಬೇಡಿಕೆ ಎದುರಿಸಲು ಸಿದ್ಧರಿದ್ದೇವೆ: ಪ್ರಧಾನ್

ಪಿಟಿಐ
Published 23 ಏಪ್ರಿಲ್ 2019, 19:46 IST
Last Updated 23 ಏಪ್ರಿಲ್ 2019, 19:46 IST
   

ನವದೆಹಲಿ: ಇರಾನ್‌ನಿಂದ ತೈಲ ಆಮದಿಗೆ ಅಮೆರಿಕ ನೀಡಿದ್ದ ವಿನಾಯ್ತಿಯು ಮೇ 2ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಭಾರತ ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ನಿರ್ಧಾರ ದಿಂದ ಇರಾನ್‌ನಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ. ಪರ್ಯಾಯವಾಗಿ ಸೌದಿ ಅರೇಬಿಯಾ, ಕುವೈತ್, ಯುಎಇ ಮತ್ತು ಮೆಕ್ಸಿಕೊದಿಂದ ಅಷ್ಟೇ ಪ್ರಮಾಣದ ತೈಲ ಆಮದು ಮಾಡಿಕೊಳ್ಳಲಿದೆ. ಮೇ 2ರ ನಂತರವೂ ವಿನಾಯ್ತಿಯನ್ನು ಮುಂದುವರಿಸುವಂತೆ ಭಾರತವು ಅಮೆರಿಕ ಸರ್ಕಾರಕ್ಕೆ ಒತ್ತಡ ತರಲಿದೆ.

‘ತೈಲಾಗಾರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆಯಾಗುವಂತಹ ಯೋಜನೆ ಸಿದ್ಧವಿದೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

‘ತೈಲ ಉತ್ಪಾದಿಸುವ ಇತರೆ ದೇಶಗಳಿಂದ ಸಾಕಷ್ಟು ತೈಲ ಪೂರೈಕೆಯಾಗುತ್ತಿದೆ. ದೇಶಿ ಬೇಡಿಕೆಗಳನ್ನು ಪೂರೈಸಲು ಭಾರತದ ತೈಲಾಗಾರಗಳು ಸಿದ್ಧವಾಗಿವೆ’ ಎಂದಿದ್ದಾರೆ.

‘ಬೇರೆ ಬೇರೆ ಮೂಲಗಳಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಕೊರತೆಯಾಗದಂತೆ ನೋಡಿಕೊಳ್ಳಲು ಹಿಂದಿನ ತಿಂಗಳಿನಿಂದಲೇ ಪರ್ಯಾಯ ಪೂರೈಕೆಗೆ ಗಮನ ನೀಡಲಾಗಿದೆ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಅಧ್ಯಕ್ಷ ಸಂಜೀವ್‌ ಸಿಂಘ್‌ ತಿಳಿಸಿದ್ದಾರೆ.

ಬರಾಕ್‌ ಒಬಾಮಾ ಆಡಳಿತಾವಧಿಯಲ್ಲಿ ಅಮೆರಿಕೆಯು ಇರಾನ್‌ ಜತೆ 2015ರಲ್ಲಿ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು ಡೊನಾಲ್ಡ್‌ ಟ್ರಂಪ್‌ ಆಡಳಿತವು 2018ರಲ್ಲಿ ರದ್ದುಪಡಿಸಿತ್ತು. ತೈಲ ರಫ್ತು ಮೇಲೆಯೂ ನಿರ್ಬಂಧ ವಿಧಿಸಿತ್ತು.ಆದರೆ, ಭಾರತವನ್ನೂ ಒಳಗೊಂಡು 8 ದೇಶಗಳಿಗೆ ಆರು ತಿಂಗಳವರೆಗೆ ತೈಲ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಗಡುವು ಈಗ ಮೇ 2ಕ್ಕೆ ಕೊನೆಗೊಳ್ಳಲಿದೆ.

ಈ ಅವಧಿಯಲ್ಲಿ ಆಮದು ಪ್ರಮಾಣವನ್ನು ಹಂತ ಹಂತವಾಗಿ ತಗ್ಗಿಸುವಂತೆ ಅಮೆರಿಕ ಸರ್ಕಾರ ಸೂಚನೆ ನೀಡಿತ್ತು. ಭಾರತವು ಇರಾನ್‌ನಿಂದ ತೈಲ ಆಮದನ್ನು ಒಂದು ತಿಂಗಳಿಗೆ 1.5 ಕೋಟಿ ಟನ್‌ಗಳಿಗೆ ಮಿತಿಗೊಳಿಸಲು ನಿರ್ಧರಿಸಿತ್ತು. ಸದ್ಯ, 2.26 ಕೋಟಿ ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. 2018ರ ನವೆಂಬರ್‌ಗೂ ಮೊದಲೇ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಹೀಗಾಗಿ 2017–18ರಲ್ಲಿ ಆಮದಾಗಿದ್ದ 2.26 ಕೋಟಿ ಟನ್‌ಗಳಿಗೆ ಹೋಲಿಸಿದರೆ 2018–19ರಲ್ಲಿ ಆಮದು ಪ್ರಮಾಣ 2.40 ಕೋಟಿ ಟನ್‌ಗಳಷ್ಟಾಗಿದೆ.

ಕೊರತೆ ಉದ್ಭವಿಸದು: ಜಾಗತಿಕ ತೈಲ ಮಾರುಕಟ್ಟೆಗೆ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಅಮೆರಿಕ, ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಬದ್ಧವಾಗಿವೆ ಎಂದು ಶ್ವೇತಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ತೈಲ ದರ ಏರಿಕೆ ಸಾಧ್ಯತೆ

ಅಮೆರಿಕದ ನಿರ್ಧಾರದಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ಸಮಸ್ಯೆ ಆಗುವುದಿಲ್ಲ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ‘ಐಒಸಿ’ ಅಧ್ಯಕ್ಷ ಸಂಜೀವ್‌ ಸಿಂಘ್‌ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ, ಬ್ರೆಂಟ್‌ ತೈಲ ದರ ಆರು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಮಂಗಳವಾರ ಒಂದು ಬ್ಯಾರೆಲ್‌ಗೆ 74.46 ಡಾಲರ್‌ಗಳಿಗೆ ತಲುಪಿದೆ.

ತಕ್ಷಣದ ಸವಾಲು

ಸಂಭವನೀಯ ತೈಲ ಬೆಲೆ ಏರಿಕೆಯಿಂದ ಹಣದುಬ್ಬರ, ರೂಪಾಯಿ ವಿನಿಮಯ ದರ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಇರಾನ್‌ ತೈಲದ ಮೂರನೇ ಅತಿ ದೊಡ್ಡ ಆಮದು ದೇಶವಾಗಿರುವ ಭಾರತಕ್ಕೆ ಸ್ಪರ್ಧಾತ್ಮಕ ದರದಲ್ಲಿ ತೈಲ ಪೂರೈಸುವ ದೇಶಗಳನ್ನು ಗುರುತಿಸುವುದು ತಕ್ಷಣದ ಸವಾಲಾಗಿರಲಿದೆ ಎಂದು ಕೇರ್‌ ರೇಟಿಂಗ್ಸ್‌ ತಿಳಿಸಿದೆ.

ಪ್ರತಿಕ್ರಿಯೆಗಳು

ಅಮೆರಿಕದ ನಿರ್ಧಾರದಿಂದ ಎದುರಾಗುವ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದೇವೆ. ಇಂಧನ ಮತ್ತು ಆರ್ಥಿಕ ಸುರಕ್ಷತೆಗಾಗಿ ಎಲ್ಲಾ ಪಾಲುದಾರ ದೇಶಗಳೊಂದಿಗೆ ಕೆಲಸ ಮಾಡಲಾಗುವುದು

- ರವೀಶ್‌ ಕುಮಾರ್,ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ

**

ಇರಾನಿನ ಅಸ್ಥಿರತೆ ಮೂಡಿಸುವ ಯೋಜನೆಗಳು ಮತ್ತು ಭಯೋತ್ಪಾದನೆಬೆಂಬಲಿಸುವುದನ್ನು ತಡೆಯಲು ಈ ನಿರ್ಧಾರ ಅಗತ್ಯವಾಗಿತ್ತು
-ಇಬ್ರಾಹಿಂ ಅಲ್‌ ಅಸ್ಸಫ್,ಸೌದಿ ಅರೇಬಿಯಾದ ವಿದೇಶಾಂಗ ಸಚಿವ

**
ಅಮೆರಿಕದ ನಿರ್ಧಾರ ಮಧ್ಯಪ್ರಾಚ್ಯ ಮತ್ತು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಚಂಚಲತೆಗೆ ಕಾರಣವಾಗಲಿದೆ. ಕೇವಲ ಇರಾನ್‌ಗೆ ವಿರುದ್ಧವಾದ ಧೋರಣೆ ತಾಳದೆ, ಜವಾಬ್ದಾರಿಯುತ ಮತ್ತು ರಚನಾತ್ಮಕ ಪಾತ್ರ ವಹಿಸುವಂತೆ ಮನವಿ ಮಾಡುತ್ತಿದ್ದೇವೆ
-ಜೆಂಗ್ ಶುವಾಂಗ್,ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ

**
ಗಡುವು ಸಮೀಪಿಸಲು ಸಮಯ ಇದೆ. ಹೀಗಾಗಿ ಅವಧಿ ವಿಸ್ತರಿಸುವಂತೆ ಅಮೆರಿಕದ ಮನವೊಲಿಸುವ ಮಾರ್ಗಗಳನ್ನು ಯೋಚಿಸುತ್ತಿದ್ದೇವೆ
- ದಕ್ಷಿಣ ಕೊರಿಯಾದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.