ADVERTISEMENT

ಅಮೆರಿಕದಿಂದ ತೈಲ ಖರೀದಿ ಹೆಚ್ಚಿಸಿದ ಭಾರತ

ಆಮದು ಪ್ರಮಾಣ ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್‌ಗೆ ಏರಿಕೆ

ಪಿಟಿಐ
Published 27 ಅಕ್ಟೋಬರ್ 2025, 16:12 IST
Last Updated 27 ಅಕ್ಟೋಬರ್ 2025, 16:12 IST
<div class="paragraphs"><p>ಅಮೆರಿಕ-ಭಾರತ</p></div>

ಅಮೆರಿಕ-ಭಾರತ

   

(ಐಸ್ಟೋಕ್ ಚಿತ್ರ)

ನವದೆಹಲಿ: ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಅಕ್ಟೋಬರ್‌ನಲ್ಲಿ ಹೆಚ್ಚಳ ಕಂಡಿದೆ. ಇದು 2022ರ ನಂತರದ ಗರಿಷ್ಠ ಮಟ್ಟ.

ADVERTISEMENT

ಕಚ್ಚಾ ತೈಲದ ಆಮದು ಪ್ರಮಾಣವನ್ನು ರಷ್ಯಾ ಹೊರಗೂ ಹೆಚ್ಚಿಸಿಕೊಳ್ಳುವ, ಅಮೆರಿಕದ ಜೊತೆ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತವು ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.

ಸೋಮವಾರದ (ಅಕ್ಟೋಬರ್‌ 27) ಹೊತ್ತಿಗೆ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್‌ಗೆ ತಲುಪಿದೆ ಎಂದು ದತ್ತಾಂಶಗಳ ಮೇಲೆ ಗಮನ ಇರಿಸುವ ಕೆಪ್ಲರ್ ಸಂಸ್ಥೆ ಹೇಳಿದೆ.

ಅಕ್ಟೋಬರ್‌ ಅಂತ್ಯದ ಹೊತ್ತಿಗೆ ಆಮದು ಪ್ರಮಾಣವು ದಿನವೊಂದಕ್ಕೆ 5.75 ಲಕ್ಷ ಬ್ಯಾರಲ್‌ಗೆ ತಲುಪಬಹುದು. ನವೆಂಬರ್‌ನಲ್ಲಿ ಆಮದು ಪ್ರಮಾಣವು ದಿನವೊಂದಕ್ಕೆ 4 ಲಕ್ಷದಿಂದ 4.5 ಲಕ್ಷದವರೆಗೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಈ ವರ್ಷದಲ್ಲಿ ಇದುವರೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಸರಾಸರಿ ಪ್ರಮಾಣಕ್ಕೆ (ದಿನವೊಂದಕ್ಕೆ 3 ಲಕ್ಷ ಬ್ಯಾರಲ್) ಹೋಲಿಸಿದರೆ ಇದು ಹೆಚ್ಚು.

ಹಣಕಾಸಿನ ಲೆಕ್ಕಾಚಾರ ಆಧರಿಸಿ ಅಮೆರಿಕದಿಂದ ಆಮದು ಪ್ರಮಾಣ ಹೆಚ್ಚಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಡಬ್ಲ್ಯುಟಿಐ ಮಿಡ್‌ಲ್ಯಾಂಡ್‌ ಕಚ್ಚಾ ತೈಲವು ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳಿಗೆ ಕಡಿಮೆ ದರಕ್ಕೆ ಸಿಕ್ಕಿದೆ ಎಂದು ಕೆಪ್ಲರ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.

ಅಮೆರಿಕದಿಂದ ಆಮದು ಹೆಚ್ಚಾಗಿದ್ದರೂ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಈಗಲೂ ರಷ್ಯಾ ಇದೆ. ಎರಡನೆಯ ಸ್ಥಾನದಲ್ಲಿ ಇರಾಕ್ ಹಾಗೂ ಮೂರನೆಯ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ.

ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಅಮೆರಿಕದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿವೆ. ತಮ್ಮ ಪೂರೈಕೆ ಜಾಲವನ್ನು ವಿಸ್ತರಿಸಿಕೊಳ್ಳುವ ಜೊತೆಗೆ, ಅಮೆರಿಕದ ಜೊತೆ ಸಹಕರಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದಿದೆ ಎಂದು ಸರ್ಕಾರ ಹಾಗೂ ವರ್ತಕರ ವಲಯದ ಮೂಲಗಳು ಹೇಳಿವೆ.

ಆದರೆ ಅಮೆರಿಕದಿಂದ ಕಚ್ಚಾ ತೈಲ ಆಮದು ಇನ್ನೂ ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ರಿತೊಲಿಯಾ ಅಭಿಪ್ರಾಯಪಟ್ಟಿದ್ದಾರೆ. ‘ಈಗ ಭಾರತವು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಿರುವುದಕ್ಕೆ ಒಂದು ಕಾರಣ ಒಳ್ಳೆಯ ಬೆಲೆಗೆ ಅದು ಸಿಕ್ಕಿರುವುದು. ಅಲ್ಲಿಂದ ಭಾರತಕ್ಕೆ ಕಚ್ಚಾ ತೈಲ ತರಲು ಹೆಚ್ಚಿನ ಸಮಯ ಬೇಕು, ಸಾಗಣೆ ವೆಚ್ಚ ಹೆಚ್ಚಾಗಿರುತ್ತದೆ. ಹೀಗಾಗಿ ಅಲ್ಲಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಆಗಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.