
ನವದೆಹಲಿ: ಭಾರತವು ಅಮೆರಿಕದ ಜೊತೆ ನ್ಯಾಯಸಮ್ಮತವಾದ, ಸಮಾನ ನೆಲೆಯ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ರೈತರು, ಮೀನುಗಾರರು, ಕಾರ್ಮಿಕರು ಮತ್ತು ಹೈನುಗಾರರ ಹಿತಾಸಕ್ತಿಗಳ ವಿಚಾರದಲ್ಲಿ ದೇಶವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗೋಯಲ್ ಅವರು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಅಮೆರಿಕದ ನಡುವೆ ಒಳ್ಳೆಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಮಾತುಕತೆ ನಡೆದಿದೆ ಎಂದಿದ್ದಾರೆ.
‘ಭಾರತದ ಹಿತಾಸಕ್ತಿಗಳಿಗೆ ಪೂರಕವಾದ ಉತ್ತಮ ವ್ಯಾಪಾರ ಒಪ್ಪಂದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ರಾಜ್ಯಗಳ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರ ಸಮಾವೇಶದಲ್ಲಿ ಹೇಳಿದ್ದಾರೆ. ‘ಅಮೆರಿಕದ ಜೊತೆ ನ್ಯಾಯಸಮ್ಮತ, ಸಮಾನ ನೆಲೆಯ ವ್ಯಾಪಾರ ಒಪ್ಪಂದವು ನಮಗೆ ಬೇಕು. ಅದು ಯಾವತ್ತು ಬೇಕಿದ್ದರೂ ಸಾಧ್ಯವಾಗಬಹುದು. ಅದು ನಾಳೆಯೇ ಆಗಬಹುದು, ಮುಂದಿನ ತಿಂಗಳು ಆಗಬಹುದು, ಮುಂದಿನ ವರ್ಷ ಆಗಬಹುದು. ಆದರೆ ಸರ್ಕಾರವಾಗಿ ನಾವು ಎಲ್ಲದಕ್ಕೂ ಸಿದ್ಧವಾಗುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳಿಗೆ ರಷ್ಯಾದಲ್ಲಿ ಹೊಸ ಮಾರುಕಟ್ಟೆ ಅರಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ. ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳ ಮೇಲೆ ಅಮೆರಿಕವು ಹೆಚ್ಚಿನ ಸುಂಕ ವಿಧಿಸಿದೆ.
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ವಿಚಾರವಾಗಿ ಐದು ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಒಪ್ಪಂದದ ಮೊದಲ ಹಂತವು ಈ ವರ್ಷದ ಅಂತ್ಯದ ಮೊದಲು ಸಾಧ್ಯವಾಗಲಿದೆ ಎಂದು ಎರಡೂ ದೇಶಗಳು ಹೇಳಿವೆ.
‘ಬೇರೆ ದೇಶಗಳು ಅಮೆರಿಕದ ಜೊತೆ ನಡೆಸಿದ ಮಾತುಕತೆಗಳಿಗೆ ಹೋಲಿಸಿದರೆ ಭಾರತ ನಡೆಸಿರುವ ವಾಣಿಜ್ಯ ಒಪ್ಪಂದ ಕುರಿತ ಮಾತುಕತೆಯು ಹೆಚ್ಚು ಸಮಗ್ರವಾಗಿದೆ, ಡಬ್ಲ್ಯುಟಿಒ ನಿಯಮಗಳಿಗೆ ಅನುಗುಣವಾಗಿದೆ. ಮಾತುಕತೆಯು ಹೆಚ್ಚು ಸಮಯ ತೆಗೆದುಕೊಂಡಿರಬಹುದು. ಆದರೆ ನಾವು ನಮ್ಮ ಸೂಕ್ಷ್ಮ ವಲಯಗಳ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಬಹಳ ಎಚ್ಚರಿಕೆಯಿಂದ ಮಾತುಕತೆ ನಡೆಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಜೊತೆ ನ್ಯಾಯಸಮ್ಮತವಾದ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳುವ ಹಂತದ ಸನಿಹಕ್ಕೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಭಾರತದ ಸರಕುಗಳ ಮೇಲೆ ವಿಧಿಸಿರುವ ಸರಕುಗಳ ಮೇಲಿನ ತೆರಿಗೆಯನ್ನು ಒಂದು ಹಂತದಲ್ಲಿ ಕಡಿಮೆ ಮಾಡುವುದಾಗಿ ಅವರು ತಿಳಿಸಿದ್ದಾರೆ.