ನವದೆಹಲಿ: ಭಾರತ ಮತ್ತು ಅಮೆರಿಕದ ನಡುವೆ ಆಗಸ್ಟ್ 1ಕ್ಕೂ ಮೊದಲು ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಕ್ಷೀಣಿಸಿದೆ.
ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳಿಗೆ ವಿಧಿಸುವ ತೆರಿಗೆಯ ವಿಚಾರದಲ್ಲಿ ಮಾತುಕತೆ ಮುಂದಕ್ಕೆ ಸಾಗುತ್ತಿಲ್ಲವಾದ ಕಾರಣಕ್ಕೆ ಹೀಗಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 26ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಆದರೆ ಮಾತುಕತೆ ನಡೆಯುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ತೆರಿಗೆ ವಿಧಿಸುವುದನ್ನು ಆಗಸ್ಟ್ 1ರವರೆಗೆ ಮುಂದೂಡಿದ್ದಾರೆ. ಮಾತುಕತೆ ಪೂರ್ಣಗೊಂಡು ಮಧ್ಯಂತರ ಒಪ್ಪಂದ ಏರ್ಪಡದೆ ಇದ್ದರೆ ಆಗಸ್ಟ್ 1ರ ನಂತರ ತೆರಿಗೆ ಕ್ರಮಗಳು ಜಾರಿಗೆ ಬರುವ ಸಾಧ್ಯತೆ ಇದೆ.
ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ರಾಜೇಶ್ ಅಗರ್ವಾಲ್ ನೇತೃತ್ವದಲ್ಲಿ ಅಮೆರಿಕಕ್ಕೆ ತೆರಳಿದ್ದ ತಂಡವು ವಾಷಿಂಗ್ಟನ್‌ನಿಂದ ವಾಪಸ್ ಬಂದಿದೆ. ಐದು ಸುತ್ತುಗಳಲ್ಲಿ ಮಾತುಕತೆ ನಡೆದಿದ್ದರೂ ಮಹತ್ವದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
‘ವರ್ಚುವಲ್ ವೇದಿಕೆಗಳನ್ನು ಬಳಸಿ ಮಾತುಕತೆ ಮುಂದುವರಿಸಲಾಗಿದೆ. ಆದರೂ, ಆಗಸ್ಟ್ 1ಕ್ಕೆ ಮೊದಲು ಮಧ್ಯಂತರ ಒಪ್ಪಂದ ಸಾಧ್ಯವಾಗುವುದು ಅನುಮಾನ’ ಎಂದು ಕೇಂದ್ರ ಸರ್ಕಾರದ ಮೂಲವೊಂದು ಹೇಳಿದೆ. ಮಾತುಕತೆ ಮುಂದುವರಿಸಲು ಅಮೆರಿಕದ ನಿಯೋಗವೊಂದು ಭಾರತಕ್ಕೆ ಶೀಘ್ರ ಭೇಟಿ ನೀಡಲಿದೆ ಎಂದು ಗೊತ್ತಾಗಿದೆ.
ರಾಜಕೀಯವಾಗಿ ಬಹಳ ಸೂಕ್ಷ್ಮವಾಗಿರುವ ಕೃಷಿ ಮತ್ತು ಹೈನು ಉತ್ಪನ್ನಗಳ ವಲಯವನ್ನು ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರವು ಒಪ್ಪುತ್ತಿಲ್ಲ. ಉಕ್ಕು, ಅಲ್ಯೂಮಿನಿಯಂ ಮತ್ತು ಆಟೊಮೊಬೈಲ್ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಬಾರದು ಎಂದು ಭಾರತ ಇರಿಸಿರುವ ಬೇಡಿಕೆಯನ್ನು ಅಮೆರಿಕ ಒಪ್ಪುತ್ತಿಲ್ಲ. ಹೀಗಾಗಿ ಮಾತುಕತೆ ಮುಂದಕ್ಕೆ ಸಾಗುತ್ತಿಲ್ಲ ಎಂದು ಮೂಲಗಳು ವಿವರಿಸಿವೆ.
ಆದರೆ, ಈ ವಿಷಯಗಳನ್ನು ಈಗ ಬಾಕಿ ಇರಿಸಿಕೊಂಡು, ಮಧ್ಯಂತರ ಒಪ್ಪಂದವನ್ನು ಮಾಡಿಕೊಳ್ಳಬಹುದೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಮಧ್ಯಂತರ ಒಪ್ಪಂದ ಸಾಧ್ಯವಾದ ನಂತರದಲ್ಲಿ ಈ ವಿಷಯಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂಬ ಅಲೋಚನೆಯು ಅವರಲ್ಲಿದೆ.
ಭಾರತದ ಸರಕುಗಳ ಮೇಲೆ ಅಮೆರಿಕವು ಹೇಳಿರುವ ಶೇ 26ರ ಪ್ರಮಾಣದ ಸುಂಕ ಜಾರಿಗೆ ಬಂದಲ್ಲಿ ಮುತ್ತು ಹಾಗೂ ಆಭರಣ ಉದ್ಯಮಕ್ಕೆ ಹೆಚ್ಚಿನ ಏಟು ಬೀಳುತ್ತದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್ ಎಚ್ಚರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ವ್ಯಾಪಾರ ಒಪ್ಪಂದದ ಸಮಯಕ್ಕಿಂತ ಹೆಚ್ಚಾಗಿ ಒಪ್ಪಂದವು ಎಷ್ಟರಮಟ್ಟಿಗೆ ಅನುಕೂಲಕರ ಆಗಿರುತ್ತದೆ ಎಂಬುದರ ಬಗ್ಗೆ ಗಮನ ನೀಡಿದೆ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.