ADVERTISEMENT

ಉದ್ಯಮಗಳಲ್ಲಿ ಹೆಚ್ಚಿದ ಆಶಾಭಾವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 23:17 IST
Last Updated 13 ನವೆಂಬರ್ 2020, 23:17 IST
ಉತ್ಪಾದನೆ
ಉತ್ಪಾದನೆ   

ನವದೆಹಲಿ: ವಾಣಿಜ್ಯೋದ್ಯಮ ಸಂಸ್ಥೆಗಳಲ್ಲಿ ಆಶಾಭಾವನೆಯು ಹಾಲಿ ತ್ರೈಮಾಸಿಕದಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕ) ಹೆಚ್ಚಾಗಿರುವುದನ್ನು ಸಮೀಕ್ಷೆಯೊಂದು ಗುರುತಿಸಿದೆ. ಹಬ್ಬದ ಸಂದರ್ಭದಲ್ಲಿ ಖರೀದಿ ಹೆಚ್ಚಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬೆಂಬಲವಾಗಿ ನಿಂತಿದ್ದರ ಪರಿಣಾಮವಾಗಿ ತಯಾರಿಕಾ ವಲಯದಲ್ಲಿ ಆಶಾಭಾವನೆಯು ಹೆಚ್ಚಿರುವುದನ್ನು ಸಮೀಕ್ಷೆ ಕಂಡುಕೊಂಡಿದೆ.

ಪ್ರಮುಖ ಕಂಪನಿಗಳ ಒಟ್ಟು 350 ಜನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಿಂದ ಈ ಸಮೀಕ್ಷೆಗಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಡನ್ ಆ್ಯಂಡ್‌ ಬ್ರಾಡ್‌ಸ್ಟ್ರೀಟ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ನಿವ್ವಳ ಲಾಭದ ವಿಚಾರದಲ್ಲಿ ಆಶಾಭಾವನೆಯು ಹಾಲಿ ತ್ರೈಮಾಸಿಕದಲ್ಲಿ ಶೇಕಡ 40ರಷ್ಟು ಇದೆ. ಇದು ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 13ರಷ್ಟು ಹೆಚ್ಚು. ಹೊಸ ಉತ್ಪನ್ನಗಳಿಗೆ ಬೇಡಿಕೆ ಬರುತ್ತದೆ ಎಂಬ ಆಶಾಭಾವನೆಯು ಹಿಂದಿನ ತ್ರೈಮಾಸಿಕಕ್ಕಿಂತ ಶೇಕಡ 21ರಷ್ಟು ಹೆಚ್ಚಾಗಿದ್ದು, ಈ ತ್ರೈಮಾಸಿಕದಲ್ಲಿ ಶೇಕಡ 43ರಷ್ಟು ಇದೆ. ಮಾರಾಟ ಪ್ರಮಾಣದ ವಿಚಾರದಲ್ಲಿ ಆಶಾಭಾವನೆಯು ಶೇಕಡ 53ರಷ್ಟು ಇದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಶೇಕಡ 29ರಷ್ಟು ಜಾಸ್ತಿ.

ADVERTISEMENT

‘ಅನ್‌ಲಾಕ್‌ 4.0 ಮತ್ತು 5.0 ಹಂತಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ
ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಯಿತು. ಇದು ತಯಾರಿಕಾ ವಲಯದಲ್ಲಿನ ಆಶಾಭಾವನೆ ಹೆಚ್ಚಲು ಕಾರಣವಾಗಿದೆ. ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕೈಗೊಂಡ ಹಲವು ಕ್ರಮಗಳು , ಬಂಡವಾಳ ವೆಚ್ಚ ಹೆಚ್ಚಿಸಲು ಕೈಗೊಂಡ ಕ್ರಮಗಳು... ಇವು ಕೂಡ ತಯಾರಿಕಾ ವಲಯದಲ್ಲಿನ ಆಶಾಭಾವನೆ ಹೆಚ್ಚಲು ಕಾರಣವಾಗಿರಬಹುದು’ ಎಂದು
ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅರುಣ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.