ADVERTISEMENT

Service Sector: ಸೇವಾ ವಲಯದಲ್ಲಿ ಅಲ್ಪ ಪ್ರಗತಿ

ಪಿಟಿಐ
Published 4 ಜೂನ್ 2025, 13:44 IST
Last Updated 4 ಜೂನ್ 2025, 13:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯವು ಮೇ ತಿಂಗಳಲ್ಲಿ ಅಲ್ಪ ಏರಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿಯು ಬುಧವಾರ ತಿಳಿಸಿದೆ.

ಏಪ್ರಿಲ್‌ ತಿಂಗಳಲ್ಲಿ ಸೂಚ್ಯಂಕವು 58.7 ಇತ್ತು. ಇದು ಮೇ ತಿಂಗಳಲ್ಲಿ 58.8 ಆಗಿದೆ. ಬೇಡಿಕೆಯ ಹೆಚ್ಚಳ, ಹೊಸ ಗ್ರಾಹಕರು ಸಿಗುತ್ತಿರುವುದು ಸೂಚ್ಯಂಕದ ಏರಿಕೆಗೆ ಕಾರಣಗಳು ಎಂದು ವರದಿಯು ತಿಳಿಸಿದೆ.

ಪರ್ಚೇಸಿಂಗ್‌ ಮ್ಯಾನೇಜರ್ಸ್ ಸೂಚ್ಯಂಕ (ಪಿಎಂಐ) ಆಧಾರದ ಮೇಲೆ ಲೆಕ್ಕ ಹಾಕುವ ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಕುಸಿತ ಎಂದು ಪರಿಗಣಿಸಲಾಗುತ್ತದೆ.

ADVERTISEMENT

‘ಸೇವಾ ವಲಯದ ಚಟುವಟಿಕೆ ಸೂಚ್ಯಂಕವು ಮೇ ತಿಂಗಳಲ್ಲಿ 58.8ರಷ್ಟು ದಾಖಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದ ಸೂಚ್ಯಂಕವು ಏರಿಕೆ ಕಂಡಿದೆ. ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ರಫ್ತು ಹೆಚ್ಚಳವಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್‌ ಭಂಡಾರಿ ಹೇಳಿದ್ದಾರೆ.

ಏಷ್ಯಾ, ಯುರೋಪ್‌ ಮತ್ತು ಉತ್ತರ ಅಮೆರಿಕದಿಂದ ರಫ್ತಿಗೆ ಬೇಡಿಕೆ ಉಂಟಾಗಿದೆ. ಹೆಚ್ಚಿದ ಬೇಡಿಕೆಯಿಂದ ದೇಶದ ಸೇವಾ ಪೂರೈಕೆದಾರರು ಹೆಚ್ಚಿನ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡವು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.