ADVERTISEMENT

ಸ್ಥಿರತೆಯತ್ತ ಸೇವಾ ವಲಯ

ಪಿಟಿಐ
Published 6 ಅಕ್ಟೋಬರ್ 2020, 12:34 IST
Last Updated 6 ಅಕ್ಟೋಬರ್ 2020, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿ ಬಹುತೇಕ ಸ್ಥಿರತೆಯತ್ತ ಮರಳಿವೆ. ಆದರೆ, ಕೊರೊನಾ ಸೋಂಕು ಹರಡುವಿಕೆಯು ಸೇವೆಗಳ ಮೇಲಿನ ಬೇಡಿಕೆಯನ್ನು ತಗ್ಗಿಸಿರುವುದರಿಂದ ಹೊಸ ವಹಿವಾಟುಗಳು ನಡೆಯುತ್ತಿಲ್ಲ. ಇದು ಹೆಚ್ಚಿನ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆ ಹೇಳಿದೆ.

‘ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ’ ಸೇವಾ ವಲಯದ ತಿಂಗಳ ಸಮೀಕ್ಷಾ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಇಂಡಿಯಾ ಸರ್ವೀಸಸ್‌ ಪರ್ಚೇಸಿಂಗ್ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಆಗಸ್ಟ್‌ನಲ್ಲಿ 41.8 ರಷ್ಟು ಇದ್ದಿದ್ದು, ಸೆಪ್ಟೆಂಬರ್‌ನಲ್ಲಿ 49.8ಕ್ಕೆ ಏರಿಕೆಯಾಗಿದೆ. ಈ ಮೂಲಕ ಸತತ ಐದನೆಯ ತಿಂಗಳಿನಲ್ಲಿಯೂ ಏರಿಕೆ ಕಂಡಂತಾಗಿದೆ.

ದೇಶದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುತ್ತಿರುವುದರಿಂದ ಸೇವಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿ ಚೇತರಿಕೆಯತ್ತ ಮರಳುವಂತಾಗಿದೆ.

ADVERTISEMENT

ಸೇವಾ ವಲಯದ ಚಟುವಟಿಕೆಗಳು ಸಕಾರಾತ್ಮಕ ಮಟ್ಟದಲ್ಲಿ ಇದೆ ಎಂದು ಪರಿಗಣಿಸಲು ಸೂಚ್ಯಂಕವು 50 ಅಥವಾ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರಬೇಕು. ಸೆಪ್ಟೆಂಬರ್‌ ತಿಂಗಳಲ್ಲಿ ಸೂಚ್ಯಂಕವು 50ಕ್ಕಿಂತ ಕಡಿಮೆ ಇರುವ ಕಾರಣ, ವಲಯದ ಚಟುವಟಿಕೆಗಳು ‘ಕುಸಿತ’ದ ಹಂತವನ್ನು ಮೀರಿಲ್ಲ.

ಸೇವಾ ವಲಯದ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬಂದಿದ್ದರೂ, ಸತತ ಏಳನೇ ತಿಂಗಳಿನಲ್ಲಿಯೂ ಉದ್ಯೋಗ ನಷ್ಟ ಕಂಡುಬಂದಿದೆ.

ಸೇವೆಗಳು ಮತ್ತು ತಯಾರಿಕಾ ವಲಯದ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಆಗಸ್ಟ್‌ನಲ್ಲಿ 46ರಷ್ಟಿತ್ತು. ಸೆಪ್ಟೆಂಬರ್‌ನಲ್ಲಿ ಇದು 54.6ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿರುವುದನ್ನು ಇದು ಸೂಚಿಸುತ್ತಿದೆ ಎಂದೂ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.