ADVERTISEMENT

ಉಕ್ಕು ದರ ಏರಿಕೆ ಸಂಭವ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:31 IST
Last Updated 6 ಅಕ್ಟೋಬರ್ 2023, 16:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಉಕ್ಕು ಉದ್ಯಮದಲ್ಲಿ ಬಳಸುವ ಕೋಕಿಂಗ್‌ ಕಲ್ಲಿದ್ದಲು ದರ ಏರಿಕೆ ಆಗಿರುವುದರಿಂದ ಭಾರತದ ಕಂ‍ಪನಿಗಳು ಉಕ್ಕು ಬೆಲೆಯನ್ನು ಹೆಚ್ಚಿಸುವ ಆಲೋಚನೆ ನಡೆಸಿವೆ ಎಂದು ದೇಶಿ ಕಾರ್ಖಾನೆಗಳ ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ ವೇಳೆಗೆ ಪ್ರತಿ ಟನ್‌ಗೆ ₹2,075ರಿಂದ ₹4,150ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನ ಮೇಲೆ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಕೋಕಿಂಗ್‌ ಕಲ್ಲಿದ್ದಲು ದರ ಶೇ 50ರಷ್ಟು ಏರಿಕೆ ಕಂಡಿದ್ದು ಪ್ರತಿ ಟನ್‌ಗೆ ₹29,050ಕ್ಕೆ ತಲುಪಿದೆ. ನಿರ್ವಹಣಾ ವೆಚ್ಚ, ಕ್ವೀನ್ಸ್‌ಲ್ಯಾಂಡ್‌ನಿಂದ ಪೂರೈಕೆ ಕಡಿಮೆ ಆಗಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ದರ ಏರಿಕೆ ಆಗಿದೆ ಎಂದು ಲಂಡನ್‌ನ ಸಂಶೋಧನಾ ಸಂಸ್ಥೆ ಸಿಆರ್‌ಯುನ ವಿಶ್ಲೇಷಕ ಬನ್ಮೀತ್‌ ಖುರ್ಮಿ ತಿಳಿಸಿದ್ಧಾರೆ.

ADVERTISEMENT

ಭಾರತವು ಆಮದು ಮಾಡಿಕೊಳ್ಳುತ್ತಿರುವ ಕೋಕಿಂಗ್ ಕಲ್ಲಿದ್ದಲಿನಲ್ಲಿ ವಾರ್ಷಿಕ 5.5 ಕೋಟಿ ಟನ್‌ನಿಂದ 6 ಕೋಟಿ ಟನ್‌ನಷ್ಟು ಆಸ್ಟ್ರೇಲಿಯಾದಿಂದ ತರಿಸಿಕೊಳ್ಳುತ್ತಿದೆ. ರಷ್ಯಾ ಮತ್ತು ಅಮೆರಿಕದಿಂದಲೂ ಭಾರತಕ್ಕೆ ಆಮದಾಗುತ್ತಿದೆ.

ಕೆಲವು ಉಕ್ಕು ಕಂಪನಿಗಳು ಈಗಾಗಲೇ ಕೆಲವು ವಿಧದ ಉಕ್ಕಿನ ಬೆಲೆಯ ಹೆಚ್ಚಿಸಲು ಆರಂಭಿಸಿವೆ. ಕಾರುಗಳಲ್ಲಿ ಬಳಸುವ ಉಕ್ಕಿನ ಬೆಲೆಯೂ ಏರಿಕೆ ಕಾಣುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.