ADVERTISEMENT

2047‌ಕ್ಕೆ $30 ಟ್ರಿಲಿಯನ್ ಆರ್ಥಿಕತೆಗಾಗಿ ಭಾರತೀಯರು ಶ್ರಮಿಸಬೇಕು:ಅಮಿತಾಬ್ ಕಾಂತ್

ಪಿಟಿಐ
Published 2 ಮಾರ್ಚ್ 2025, 13:21 IST
Last Updated 2 ಮಾರ್ಚ್ 2025, 13:21 IST
   

ನವದೆಹಲಿ: 2047ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯವನ್ನು $30 ಟ್ರಿಲಿಯನ್‌ಗೆ ಏರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತೀಯರು ಕಷ್ಟಪಟ್ಟು ದುಡಿಯಬೇಕಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.

ಕೆಲಸದ ಸಮಯದ ಬಗ್ಗೆ ನಡೆಯುತ್ತಿರುವ ಚರ್ಚೆ ಕುರಿತಂತೆ ಮಾತನಾಡಿದ ಅವರು, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳು ಬಲವಾದ ಕೆಲಸದ ನೀತಿಯ ಮೂಲಕ ಆರ್ಥಿಕ ಯಶಸ್ಸನ್ನು ಸಾಧಿಸಿವೆ. ವಿಶ್ವ ದರ್ಜೆಯ ಆರ್ಥಿಕತೆಯನ್ನು ನಿರ್ಮಿಸಲು ಭಾರತವು ಇದೇ ರೀತಿಯ ಮನ:ಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

‘ನಾನು ಕಠಿಣ ಪರಿಶ್ರಮವನ್ನು ಬಲವಾಗಿ ನಂಬುತ್ತೇನೆ. ಭಾರತೀಯರು ವಾರಕ್ಕೆ 80 ಗಂಟೆಗಳು ಅಥವಾ 90 ಗಂಟೆಗಳು ಕಷ್ಟಪಟ್ಟು ಕೆಲಸ ಮಾಡಬೇಕು. ಭಾರತದ ಆರ್ಥಿಕತೆಯನ್ನು $4 ಟ್ರಿಲಿಯನ್‌ನಿಂದ ಮಹತ್ವಾಕಾಂಕ್ಷೆಯ $30 ಟ್ರಿಲಿಯನ್‌ಗೆ ಬೆಳೆಸುವತ್ತ ಸಾಗುವುದಾದರೆ ಶ್ರಮಪಡಬೇಕು. ಮನರಂಜನೆಯ ಮೂಲಕ ಅಥವಾ ಕೆಲವು ಚಲನಚಿತ್ರ ತಾರೆಯರ ಅಭಿಪ್ರಾಯಗಳನ್ನು ಅನುಸರಿಸುವ ಮೂಲಕ ಅದನ್ನು ಸಾಧಿಸಲು ಸಾಧ್ಯವಿಲ್ಲ’ಎಂದು ಅವರು ಬಿಸಿನೆಸ್ ಸ್ಟಾಂಡರ್ಡ್‌ನ ಮಂಥನ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಹೇಳಿದರು.

ADVERTISEMENT

ಪ್ರಸ್ತುತ, ಭಾರತದ ಆರ್ಥಿಕತೆಯ ಗಾತ್ರ ಸುಮಾರು $4 ಟ್ರಿಲಿಯನ್ ಆಗಿದೆ.

'ನಾವು ಕಷ್ಟಪಟ್ಟು ಕೆಲಸ ಮಾಡದಿರುವ ಬಗ್ಗೆ ಮಾತನಾಡುವುದನ್ನು ಫ್ಯಾಶನ್ ಆಗಿಸಿಕೊಂಡಿರುವುದೇಕೆ? ಸಮಯ ಮತ್ತು ವೆಚ್ಚದ ಮಿತಿಯಿಲ್ಲದೆ, ವಿಶ್ವದರ್ಜೆಯ ಶ್ರೇಷ್ಠತೆಯೊಂದಿಗೆ ಯೋಜನೆಗಳನ್ನು ಸಮಯಕ್ಕಿಂತ ಮುಂಚಿತವಾಗಿ ಮುಗಿಸಲು ಭಾರತವು ಶ್ರಮಿಸಬೇಕು’ಎಂದು ಅವರು ಹೇಳಿದ್ದಾರೆ.

ಕೆಲಸ-ಜೀವನದ ಸಮತೋಲನದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂತ್, ಶಿಸ್ತುಬದ್ಧ ಕೆಲಸದ ವೇಳಾಪಟ್ಟಿಯಲ್ಲಿ ವೈಯಕ್ತಿಕ ಯೋಗಕ್ಷೇಮಕ್ಕೆ ಸಾಕಷ್ಟು ಸಮಯವಿದೆ ಎಂದು ಒತ್ತಿ ಹೇಳಿದ್ದಾರೆ.

‘ನಾನು ಪ್ರತಿದಿನ ಕೆಲಸ ಮಾಡುತ್ತೇನೆ. ವ್ಯಾಯಾಮ ಮಾಡುತ್ತೇನೆ. ಗಾಲ್ಫ್ ಆಡುತ್ತೇನೆ. ನಿಮಗಾಗಿ ಒಂದೂವರೆ ಗಂಟೆಯನ್ನು ಮೀಸಲಿಡಿ. ನಿಮಗೆ ಇನ್ನೂ 22.5 ಗಂಟೆಗಳ ದಿನವಿದೆ. ಕೆಲಸ-ಜೀವನದ ಸಮತೋಲನವನ್ನು ನಿರ್ವಹಿಸಲು ಸಾಕಷ್ಟು ಸಮಯವಿದೆ. ಆದರೆ, ಕಷ್ಟಪಟ್ಟು ಕೆಲಸ ಮಾಡಬಾರದು ಎಂದು ಹೇಳುವುದನ್ನು ಫ್ಯಾಶನ್ ಮಾಡಬೇಡಿ’ ಕಾಂತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.