ADVERTISEMENT

ಕಾಫಿ ರಫ್ತು ಶೇ 5.4 ಕುಸಿತ

2023ರಲ್ಲಿ 3.77 ಲಕ್ಷ ಟನ್‌ಗೆ ಇಳಿಕೆ

ಪಿಟಿಐ
Published 24 ಜನವರಿ 2024, 15:55 IST
Last Updated 24 ಜನವರಿ 2024, 15:55 IST
ರೊಬಸ್ಟಾ ಕಾಫಿ
ರೊಬಸ್ಟಾ ಕಾಫಿ   

ನವದೆಹಲಿ: ದೇಶದಲ್ಲಿ 2023ನೇ ಸಾಲಿನಡಿ ಕಾಫಿ ರಫ್ತು ಶೇ 5.4ರಷ್ಟು ಕುಸಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2022ನೇ ಸಾಲಿನಡಿ ವಿದೇಶಕ್ಕೆ 3.98 ಲಕ್ಷ ಟನ್‌ ಕಾಫಿ ರಫ್ತು ಆಗಿತ್ತು. 2023ರಲ್ಲಿ 3.77 ಲಕ್ಷ ಟನ್‌ಗೆ ಇಳಿಕೆಯಾಗಿದೆ. ರೊಬಸ್ಟಾ ಕಾಫಿ ರಫ್ತು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ. 

ಅರೇಬಿಕಾ ಮತ್ತು ರೊಬಸ್ಟಾ ತಳಿಯ ಕಾಫಿ ಉತ್ಪಾದನೆ ಮತ್ತು ರಫ್ತು ಮಾಡುವುದರಲ್ಲಿ ಭಾರತವು ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಇಟಲಿ, ರಷ್ಯಾ, ಯುಎಇ, ಜರ್ಮನಿ ಮತ್ತು ಟರ್ಕಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. 

ADVERTISEMENT

ರೊಬಸ್ಟಾಗೆ ಹೋಲಿಸಿದರೆ ಅರೇಬಿಕಾ ಕಾಫಿ ಬೀಜಗಳಲ್ಲಿ ಕೆ‌ಫಿನ್‌ ಅಂಶದ ಪ್ರಮಾಣ ಕಡಿಮೆ ಇದೆ. ಅಲ್ಲದೆ, ಸ್ವಲ್ಪ ಒಗರು ಕಡಿಮೆ ಇದ್ದು, ಹೆಚ್ಚು ರುಚಿಯಾಗಿರುತ್ತದೆ. ಆದರೆ, ರೊಬಸ್ಟಾದಲ್ಲಿ ಒಗರು ಮತ್ತು ಸ್ವಲ್ಪ ಕಹಿ ಇರುತ್ತದೆ. 

ದೇಶದಲ್ಲಿ ರೊಬಸ್ಟಾ ರಫ್ತು ಶೇ 15ರಷ್ಟು ಕುಸಿದಿದೆ. 2022ರಲ್ಲಿ 2.20 ಲಕ್ಷ ಟನ್‌ ರಫ್ತು ಮಾಡಲಾಗಿತ್ತು. 2023ರಲ್ಲಿ 1.87 ಲಕ್ಷ ಟನ್‌ಗೆ ಇಳಿದಿದೆ. ಆದರೆ, ಅರೇಬಿಕಾ ಕಾಫಿ ರಫ್ತು ಶೇ 5.79ರಷ್ಟು ಏರಿಕೆಯಾಗಿದೆ. 2022ರಲ್ಲಿ 44,302 ಟನ್‌ ರಫ್ತು ಮಾಡಲಾಗಿತ್ತು. 2023ರಲ್ಲಿ 46,869 ಟನ್‌ಗೆ ಏರಿಕೆಯಾಗಿದೆ. 

ಇನ್‌ಸ್ಟಂಟ್ ಕಾಫಿ ರಫ್ತು ಪ್ರಮಾಣವೂ ಶೇ 6.68ರಷ್ಟು ಹೆಚ್ಚಳವಾಗಿದೆ. ಭಾರತವು 2022ರಲ್ಲಿ 1.33 ಲಕ್ಷ ಟನ್‌ನಷ್ಟು ರಫ್ತು ಮಾಡಿತ್ತು. 2023ರಲ್ಲಿ 1.42 ಲಕ್ಷ ಟನ್‌ನಷ್ಟು ಇನ್‌ಸ್ಟಂಟ್ ಕಾಫಿಯನ್ನು ರಫ್ತು ಮಾಡಲಾಗಿದೆ.

2023–24ರ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌–ನವೆಂಬರ್‌) ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಕಾಫಿ ಉತ್ಪಾದನೆಯಾಗಲಿದೆ ಎಂದು ಕಾಫಿ ಮಂಡಳಿ ಹೇಳಿದೆ.

ಉತ್ಪಾದನೆ ಕುಂಠಿತ: ಲಾಭ ಮರೀಚಿಕೆ

ಬ್ರೆಜಿಲ್‌ ಮತ್ತು ವಿಯೆಟ್ನಾಂನಲ್ಲಿ ಕಾಫಿ ಉತ್ಪಾದನೆಯು ಕಡಿಮೆ ಆಗಿರುವುದರಿಂದ ಕಾಫಿಗೆ ಸಾರ್ವಕಾಲಿಕ ದಾಖಲೆಯ ಬೆಲೆ ಲಭಿಸಿದೆ. ಆದರೆ ರಾಜ್ಯದಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗಿದ್ದು ಬೆಳೆಗಾರರಿಗೆ ಸಂಪೂರ್ಣ ಲಾಭ ದೊರಕದಂತಾಗಿದೆ. ರೊಬಸ್ಟಾ ಕಾಫಿ ಪ್ರತಿ ಮೂಟೆಗೆ ₹7370 ದರ ಇದೆ. ಲಂಡನ್‌ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಬೆಲೆ ಬುಧವಾರ 3229 ಡಾಲರ್ ಇತ್ತು. ಇನ್ನೂ 46 ಡಾಲರ್ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.  ಆದರೆ ರಾಜ್ಯದಲ್ಲಿ ಈ ಬಾರಿ ಹವಾಮಾನ್ಯ ವೈಪರೀತ್ಯದಿಂದ ಕಾಫಿ ಉತ್ಪಾದನೆ ಶೇ 20ರಿಂದ ಶೇ 30ರಷ್ಟು ಕಡಿಮೆಯಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಮಳೆ ಬರಲಿಲ್ಲ. ಮುಂಗಾರಿನಲ್ಲೂ ವಾಡಿಕೆಯಷ್ಟು ಮಳೆಯಾಗಲಿಲ್ಲ. ಇದರಿಂದ ಫಸಲು ಕಡಿಮೆಯಾಗಿದೆ. ಈ ನಡುವೆ ಕಾಫಿ ಹಣ್ಣು ಕೊಯ್ಲಿನ ವೇಳೆ ಅಕಾಲಿಕ ಮಳೆಯಾಗಿದ್ದು ಗಿಡದಲ್ಲೇ ಹಣ್ಣು ಕೊಳೆಯುವಂತಾಯಿತು. ಇನ್ನಷ್ಟು ನೆಲಕ್ಕೆ ಉದುರಿ ಮಣ್ಣು ಪಾಲಾಗಿದೆ. ‘ಈಗ ಬಿಸಿಲಿದ್ದರೂ ಕಾರ್ಮಿಕರ ಕೊರತೆಯಿಂದ ಕೊಯ್ಲು ಸಾಧ್ಯವಾಗುತ್ತಿಲ್ಲ. ಹಣ್ಣು ಕೊಯ್ಲಿನ ಬಳಿಕ ಸಂಸ್ಕರಣೆ ಮಾಡಿ ಬೆಲೆ ಹೆಚ್ಚಳದ ಲಾಭ ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ’ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.