ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಭಾರತದಿಂದ ಆಗಿರುವ ರಫ್ತು ಶೇಕಡ 6.74ರಷ್ಟು ಹೆಚ್ಚಳ ಕಂಡು, 36.38 ಬಿಲಿಯನ್ ಡಾಲರ್‌ಗೆ (₹3.20 ಲಕ್ಷ ಕೋಟಿ) ತಲುಪಿದೆ. ಆಮದು ಪ್ರಮಾಣವು ಶೇ 16.6ರಷ್ಟು ಹೆಚ್ಚಳ ಕಂಡಿದ್ದು, ವ್ಯಾಪಾರ ಕೊರತೆ ಅಂತರವು 31.15 ಬಿಲಿಯನ್ ಡಾಲರ್‌ಗೆ (₹2.74 ಲಕ್ಷ ಕೋಟಿ) ತಲುಪಿದೆ.
ಈ ವ್ಯಾಪಾರ ಕೊರತೆಯು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಅತಿಹೆಚ್ಚಿನದ್ದಾಗಿದೆ. ಚಿನ್ನ, ರಸಗೊಬ್ಬರ ಮತ್ತು ಬೆಳ್ಳಿಯ ಆಮದು ಹೆಚ್ಚಾದ ಕಾರಣದಿಂದಾಗಿ ಸೆಪ್ಟೆಂಬರ್‌ನಲ್ಲಿ ಆಮದು ಮೊತ್ತವು 68.53 ಬಿಲಿಯನ್ ಡಾಲರ್‌ಗೆ (₹6.03 ಲಕ್ಷ ಕೋಟಿ) ಏರಿಕೆ ಆಗಿದೆ.
ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣವು ಶೇ 3.02ರಷ್ಟು ಹೆಚ್ಚಳ ಆಗಿದೆ. ಆಮದು ಪ್ರಮಾಣವು ಇದೇ ಅವಧಿಯಲ್ಲಿ ಶೇ 4.53ರಷ್ಟು ಜಾಸ್ತಿ ಆಗಿದೆ.
ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಭಾರತದ ಸರಕು ಮತ್ತು ಸೇವೆಗಳ ರಫ್ತು ಚೆನ್ನಾಗಿ ಆಗುತ್ತಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
ದೇಶದ ಉದ್ಯಮ ವಲಯವು ತನ್ನ ವಾಣಿಜ್ಯ ಸಂಬಂಧವನ್ನು ಕಾಪಾಡಿಕೊಂಡಿದೆ, ಪೂರೈಕೆ ವ್ಯವಸ್ಥೆಯನ್ನು ಕೂಡ ಅದು ರಕ್ಷಿಸಿಕೊಂಡಿದೆ. ಹೀಗಾಗಿ ರಫ್ತು ಹೆಚ್ಚಳ ಆಗಿದೆ ಎಂದು ಅಗರ್ವಾಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತಿನಲ್ಲಿ ಶೇ 45ರಷ್ಟು ಪಾಲು ಈಗಲೂ ಶೇ 50 ಪ್ರಮಾಣದ ಸುಂಕದ ವ್ಯಾಪ್ತಿಯಿಂದ ಹೊರಗಿದೆ ಎಂದಿದ್ದಾರೆ.