ADVERTISEMENT

ಜಿಡಿಪಿ ಶೇ 5.2ರಷ್ಟು ಕುಸಿತ: ಇಂಡ್‌ರೇ ಅಂದಾಜು

ಪಿಟಿಐ
Published 24 ಜೂನ್ 2020, 13:28 IST
Last Updated 24 ಜೂನ್ 2020, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 5.3ರಷ್ಟು ಕುಸಿತ ಕಾಣಲಿದ್ದು, ಇದು ದೇಶದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮಟ್ಟದ ಜಿಡಿಪಿ ಪ್ರಗತಿಯಾಗಿರಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ತಿಳಿಸಿದೆ.

‘ಕೋವಿಡ್‌–19’ ಪಿಡುಗಿನ ಕಾರಣಕ್ಕೆ ತೀವ್ರವಾಗಿ ಬಾಧಿತವಾಗಿರುವ ಆರ್ಥಿಕ ಚಟುವಟಿಕೆಗಳಿಂದಾಗಿ 2020–21ನೇ ಹಣಕಾಸು ವರ್ಷದ ಉದ್ದಕ್ಕೂ ಆರ್ಥಿಕತೆಯು ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಇರುವುದಿಲ್ಲ ಎಂದು ರೇಟಿಂಗ್‌ ಸಂಸ್ಥೆಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಈ ವರ್ಷದ ಪ್ರತಿ ತ್ರೈಮಾಸಿಕದಲ್ಲಿಯೂ ವೃದ್ಧಿ ದರವು ಕುಸಿತ ದಾಖಲಿಸಲಿದೆ. ಮುಂದಿನ ಹಣಕಾಸು ವರ್ಷದಲ್ಲಿ (2021ರ ಏಪ್ರಿಲ್‌ನಿಂದ 2022ರ ಮಾರ್ಚ್‌) ಶೇ 5ರಿಂದ ಶೇ 6ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಸಂಸ್ಥೆಯು ಅಂದಾಜಿಸಿದೆ.

ADVERTISEMENT

ಜಿಡಿಪಿಯು ಶೇ 5.3ರಷ್ಟು ಕುಸಿತ ಕಾಣಲಿರುವುದು ದೇಶದ ಇತಿಹಾಸದಲ್ಲಿನ ಅತ್ಯಂತ ಕಡಿಮೆ ಮಟ್ಟದ ಜಿಡಿಪಿ ಪ್ರಗತಿಯಾಗಿರಲಿದೆ. 1951ರ ಹಣಕಾಸು ವರ್ಷದಿಂದ ಜಿಡಿಪಿ ಅಂಕಿ ಅಂಶಗಳು ಲಭ್ಯ ಇವೆ. ಇದುವರೆಗೆ 5 ಬಾರಿ ಜಿಡಿಪಿ ಕುಸಿತ ದಾಖಲಿಸಿದೆ. ಈ ವರ್ಷದ ಕುಸಿತವು 6ನೇ ಬಾರಿಯದಾಗಿದೆ. 2008ರಲ್ಲಿ (–) ಶೇ 5.2ರಷ್ಟು ನಕಾರಾತ್ಮಕ ಕುಸಿತ ಕಂಡಿತ್ತು.

ಕೋವಿಡ್‌ ಪಿಡುಗಿನ ಮುಂಚೆಯೂ ದೇಶಿ ಆರ್ಥಿಕತೆಯಲ್ಲಿ ಬೇಡಿಕೆ ಕುಸಿದಿತ್ತು. ಲಾಕ್‌ಡೌನ್‌ ಹೇರಿಕೆ ಮತ್ತು ಜೀವನೋಪಾಯದ ಮೇಲಿನ ಅದರ ಪ್ರತಿಕೂಲ ಪರಿಣಾಮಗಳು ಸರಕು ಮತ್ತು ಸೇವೆಗಳ ಬೇಡಿಕೆ ಕುಸಿತವನ್ನು ಇನ್ನಷ್ಟು ಹೆಚ್ಚಿಸಿವೆ. ಸರ್ಕಾರಕ್ಕೆ ಈ ಪರಿಸ್ಥಿತಿಯ ಅರಿವು ಇದೆ. ಆರ್ಥಿಕ ಉತ್ತೇಜನಾ ಕೊಡುಗೆಗಳಲ್ಲಿ ಬೇಡಿಕೆ ಹೆಚ್ಚಿಸುವ ಕ್ರಮಗಳು ಇಲ್ಲದಿರುವುದಕ್ಕೆ ಸರ್ಕಾರದ ಬಳಿ ಹಣಕಾಸಿನ ಸಂಪನ್ಮೂಲ ಇಲ್ಲದಿರುವುದೇ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.