ADVERTISEMENT

2021–22ನೇ ಆರ್ಥಿಕ ವರ್ಷದಲ್ಲಿ ಶೇ 8.7ರಷ್ಟು ಬೆಳವಣಿಗೆ ದಾಖಲಿಸಿದ ಜಿಡಿಪಿ

ಪಿಟಿಐ
Published 31 ಮೇ 2022, 15:47 IST
Last Updated 31 ಮೇ 2022, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು ಜನವರಿ–ಮಾರ್ಚ್‌ ಅವಧಿಯಲ್ಲಿ ಶೇಕಡ 4.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ 2021–22ನೆಯ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ 8.7ರಷ್ಟು ಆದಂತಾಗಿದೆ.

ತಯಾರಿಕೆ, ಗಣಿಗಾರಿಕೆ ಮತ್ತು ನಿರ್ಮಾಣ ವಲಯಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಕೋವಿಡ್‌ ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ಭಾರಿ ಏಟು ನೀಡಿದ್ದ ಕಾರಣ, 2020–21ನೆಯ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ (–) 6.6ರಷ್ಟು ಕುಸಿತ ಕಂಡಿತ್ತು.

ADVERTISEMENT

ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿನ ಶೇ 4.1ರ ಬೆಳವಣಿಗೆಯು ಹಿಂದಿನ ಆರ್ಥಿಕ ವರ್ಷದಲ್ಲಿನ ಅತಿ ಕಡಿಮೆ ಬೆಳವಣಿಗೆ ದರ. ಹಿಂದಿನ ವರ್ಷದ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇ 2.5ರಷ್ಟು ಬೆಳವಣಿಗೆ ಸಾಧಿಸಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು, 2021–22ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ 8.9ರಷ್ಟು ಇರಲಿದೆ ಎಂದು ಫೆಬ್ರುವರಿಯಲ್ಲಿ ಅಂದಾಜು ಮಾಡಿತ್ತು. ಆದರೆ, ಅದು ಶೇ 8.7ರಷ್ಟು ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2022–23) ಆರ್ಥಿಕ ಬೆಳವಣಿಗೆ ದರವು ಶೇ 8ರಿಂದ ಶೇ 8.5ರ ಮಟ್ಟದಲ್ಲಿ ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಅಂದಾಜು ಮಾಡಲಾಗಿದೆ.

2021–22ರಲ್ಲಿ ತಯಾರಿಕಾ ವಲಯದಲ್ಲಿ ಶೇ 9.9ರಷ್ಟು ಬೆಳವಣಿಗೆ ಆಗಿದೆ, ಗಣಿಗಾರಿಕೆ ಮತ್ತು ನಿರ್ಮಾಣ ವಲಯಗಳಲ್ಲಿ ಶೇ 11.5ರಷ್ಟು ಬೆಳವಣಿಗೆ ಆಗಿದೆ. 2020–21ರಲ್ಲಿ ಕುಸಿತ ದಾಖಲಾಗಿತ್ತು. 2021–22ರಲ್ಲಿ ಕೃಷಿ ಚಟುವಟಿಕೆಗಳ ಬೆಳವಣಿಗೆ ಪ್ರಮಾಣವು ಶೇ 3ಕ್ಕೆ ಕುಸಿದಿದೆ (ಹಿಂದಿನ ವರ್ಷದಲ್ಲಿ ಇದು ಶೇ 3.3ರಷ್ಟಿತ್ತು).

ಎನ್‌ಎಸ್‌ಒ ನೀಡಿರುವ ಅಂಕಿ–ಅಂಶಗಳ ಪ್ರಕಾರ ತಲಾ ಆದಾಯವು 2021–22ರಲ್ಲಿ ₹ 1.5 ಲಕ್ಷಕ್ಕೆ ಏರಿಕೆ ಆಗಿದ್ದು, ಶೇ 18.3ರಷ್ಟು ಬೆಳವಣಿಗೆ ಕಂಡುಬಂದಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಇದು ₹ 1.26 ಲಕ್ಷ ಆಗಿತ್ತು.

***

₹ 147.36 ಲಕ್ಷ ಕೋಟಿ: 2021–22ರಲ್ಲಿ ದೇಶದಲ್ಲಿನ ಜಿಡಿಪಿ ಮೊತ್ತ

₹ 135.58 ಲಕ್ಷ ಕೋಟಿ: 2020–21ರಲ್ಲಿ ದೇಶದ ಜಿಡಿಪಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.