ADVERTISEMENT

2021ರಲ್ಲಿ ಚಿನ್ನಕ್ಕೆ ಬೇಡಿಕೆ ಶೇ 78ರಷ್ಟು ಏರಿಕೆ

ಪಿಟಿಐ
Published 28 ಜನವರಿ 2022, 14:19 IST
Last Updated 28 ಜನವರಿ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: 2021ರಲ್ಲಿ ಭಾರತದಲ್ಲಿನ ಚಿನ್ನದ ಬೇಡಿಕೆಯು 797.3 ಟನ್‌ಗೆ ಹೆಚ್ಚಳ ಆಗಿದೆ. ಚಿನ್ನದ ಬೇಡಿಕೆಯಲ್ಲಿ 2022ರಲ್ಲಿಯೂ ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಹೇಳಿದೆ.

ಗ್ರಾಹಕರಿಂದ ಬೇಡಿಕೆಯಲ್ಲಿ ಸುಧಾರಣೆ ಕಂಡುಬಂದಿದ್ದು, ಕೋವಿಡ್‌–19ನಿಂದಾಗಿ ಹಿಂದೆ ಚಿನ್ನ ಖರೀದಿಸಲು ಆಗದಿದ್ದವರು, 2021ರಲ್ಲಿ ಖರೀದಿಸಿದ್ದು ಚಿನ್ನಕ್ಕೆ ಬೇಡಿಕೆ ಹೆಚ್ಚಾಗಲು ಕಾರಣ ಎಂದು ಸಮಿತಿಯು ಹೇಳಿದೆ.

ಚಿನ್ನದ ಬೇಡಿಕೆ ಕುರಿತ ವರದಿಯಲ್ಲಿ ಡಬ್ಲ್ಯುಜಿಸಿ, 2021ರಲ್ಲಿ ಭಾರತದಲ್ಲಿ ಚಿನ್ನಕ್ಕೆ ವ್ಯಕ್ತವಾದ ಬೇಡಿಕೆಯಲ್ಲಿ ಶೇಕಡ 78.6ರಷ್ಟು ಹೆಚ್ಚಳ ಆಗಿದೆ ಎಂದು ಹೇಳಿದೆ. 2020ರಲ್ಲಿ 446.4 ಟನ್ ಚಿನ್ನಕ್ಕೆ ಬೇಡಿಕೆ ಬಂದಿತ್ತು. ‘ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ 343 ಟನ್ ಚಿನ್ನಕ್ಕೆ ಬೇಡಿಕೆ ಬಂದಿದೆ. ಇದು ನಮ್ಮ ನಿರೀಕ್ಷೆಗಿಂತಲೂ ಹೆಚ್ಚು. ಒಟ್ಟು ಬೇಡಿಕೆ ಹೆಚ್ಚಳವಾಗಿದ್ದಕ್ಕೆ ಡಿಸೆಂಬರ್ ತ್ರೈಮಾಸಿಕದ ಬೇಡಿಕೆಯೂ ಒಂದು ಕಾರಣ. ನಮ್ಮ ದಾಖಲೆಗಳ ಪ್ರಕಾರ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಡುಬಂದ ಬೇಡಿಕೆಯು ಅತ್ಯುತ್ತಮ ಮಟ್ಟದ್ದಾಗಿತ್ತು’ ಎಂದು ಸಮಿತಿಯ ಭಾರತದ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಆರ್. ಸೋಮಸುಂದರಂ ತಿಳಿಸಿದರು.

ADVERTISEMENT

ಕೋವಿಡ್‌–19, ಮುಂದೆ ಬರಬಹುದಾದ ಕೊರೊನಾದ ರೂಪಾಂತರಿ ತಳಿಗಳು, ಚಿನ್ನದ ಬೆಲೆಯಲ್ಲಿ ಆಗಬಹುದಾದ ವ್ಯತ್ಯಾಸ, ಬಡ್ಡಿ ದರಗಳು ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಉಂಟುಮಾಡಲಿವೆ ಎಂದು ಅವರು ಹೇಳಿದರು. ‘ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಡುಬಂದ ಪ್ರಮಾಣದ ಬೇಡಿಕೆಯು ಮುಂದಿನ ದಿನಗಳಲ್ಲಿಯೂ ಕಂಡುಬರುತ್ತದೆ ಎನ್ನಲಾಗದು’ ಎಂದೂ ಅವರು ಹೇಳಿದರು.

2022ರಲ್ಲಿ ದೊಡ್ಡ ಪ್ರಮಾಣದ ಅಡ್ಡಿಗಳು ಎದುರಾಗದೆ ಇದ್ದರೆ ದೇಶದಲ್ಲಿ ಚಿನ್ನದ ಬೇಡಿಕೆಯು 800 ಟನ್‌ನಿಂದ 850 ಟನ್‌ವರೆಗೆ ಹೆಚ್ಚಳ ಕಾಣಬಹುದು ಎಂದು ಸಮಿತಿ ಅಂದಾಜು ಮಾಡಿದೆ. 2021ರಲ್ಲಿ ಚಿನ್ನಾಭರಣಗಳ ಬೇಡಿಕೆಯು ಶೇ 93ರಷ್ಟು ಹೆಚ್ಚಾಗಿ, 610.9 ಟನ್‌ಗೆ ತಲುಪಿತು. ಹೂಡಿಕೆಗಾಗಿ ಚಿನ್ನದ ಬೇಡಿಕೆಯು ಶೇ 43ರಷ್ಟು ಹೆಚ್ಚಳ ಕಂಡು, 186.5 ಟನ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.