ADVERTISEMENT

‘ಮಾರ್ಚ್‌ನಲ್ಲಿ ಹಣದುಬ್ಬರ ಹೆಚ್ಚಳ’-ಸಮೀಕ್ಷೆ

ರಾಯಿಟರ್ಸ್
Published 9 ಏಪ್ರಿಲ್ 2021, 16:36 IST
Last Updated 9 ಏಪ್ರಿಲ್ 2021, 16:36 IST

ಬೆಂಗಳೂರು: ತೈಲ ಹಾಗೂ ಆಹಾರ ಉತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳದ ಕಾರಣದಿಂದಾಗಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಮಾರ್ಚ್‌ ತಿಂಗಳಲ್ಲಿ ಶೇಕಡ 5.4ಕ್ಕೆ ಏರಿಕೆ ಆಗಿದೆ ಎಂದು ರಾಯಿಟರ್ಸ್‌ ನಡೆಸಿದ ಸಮೀಕ್ಷೆಯು ಹೇಳಿದೆ.

ಈ ಸಮೀಕ್ಷೆಯನ್ನು ಏಪ್ರಿಲ್‌ 5ರಿಂದ 8ರವರೆಗೆ ನಡೆಸಲಾಗಿದೆ. 50ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.03ರಷ್ಟು ಇತ್ತು.

‘ಆಹಾರೇತರ ವಸ್ತುಗಳ ಹಣದುಬ್ಬರ ದರವು ಈಚೆಗೆ ಕೆಲವು ಸಮಯದಿಂದ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಆದರೆ, ಈಚೆಗೆ ಆಹಾರ ಹಾಗೂ ಇಂಧನ ಹಣದುಬ್ಬರ ಕೂಡ ಜಾಸ್ತಿ ಆಗಿದೆ. ಹಣದುಬ್ಬರ ಹೆಚ್ಚಳವು ತಾತ್ಕಾಲಿಕ ಎಂಬುದು ನನ್ನ ಭಾವನೆ’ ಎಂದು ಅರ್ಥಶಾಸ್ತ್ರಜ್ಞೆ ಟುಲಿ ಮೆಕ್‌ಕಲ್ಲಿ ಹೇಳಿದ್ದಾರೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 5.2ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ‘ದೇಶದ ಕೆಲವು ನಗರಗಳಲ್ಲಿ ಈಗ ಮತ್ತೆ ಲಾಕ್‌ಡೌನ್‌ ಜಾರಿಗೆ ಬಂದಿದೆ. ಇನ್ನೂ ಕೆಲವು ನಗರಗಳಲ್ಲಿ ಇಂತಹ ಕ್ರಮಗಳು ಜಾರಿಗೆ ಬರಬಹುದು. ಲಾಕ್‌ಡೌನ್‌ ಆಗಬಹುದು ಎಂಬ ಭೀತಿಯಿಂದ ಜನ ಖರೀದಿಗೆ ಮುಂದಾದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಒತ್ತಡ ಸೃಷ್ಟಿಯಾಗಬಹುದು’ ಎಂದು ಅರ್ಥಶಾಸ್ತ್ರಜ್ಞ ಪ್ರಕಾಶ್ ಸಕ್ಪಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.