ADVERTISEMENT

ಸೇವಾ ಚಟುವಟಿಕೆ 6 ತಿಂಗಳ ಕನಿಷ್ಠ

ಸತತ 14ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಚಲನೆ: ಎಸ್‌ ಆ್ಯಂಡ್‌ ಪಿ

ಪಿಟಿಐ
Published 6 ಅಕ್ಟೋಬರ್ 2022, 18:15 IST
Last Updated 6 ಅಕ್ಟೋಬರ್ 2022, 18:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಸೆಪ್ಟೆಂಬರ್‌ನಲ್ಲಿ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯು ಗುರುವಾರ ಹೇಳಿದೆ.

ಸೇವಾ ವಲಯದ ಚಟುವಟಿಕೆಯನ್ನು ತಿಳಿಸುವ ಸೂಚ್ಯಂಕವು ಆಗಸ್ಟ್‌ನಲ್ಲಿ 57.2ರಷ್ಟು ಇತ್ತು. ಸೆಪ್ಟೆಂಬರ್‌ನಲ್ಲಿ 54.3ಕ್ಕೆ ಇಳಿಕೆ ಆಗಿದೆ. ಹಣದುಬ್ಬರದ ಒತ್ತಡ ಮತ್ತು ಕಂಪನಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿರುವುದರಿಂದ ಹೊಸ ಯೋಜನೆಗಳ ಬೇಡಿಕೆಯು ಮಾರ್ಚ್‌ ಬಳಿಕ ಅತ್ಯಂತ ನಿಧಾನಗತಿಯ ಹೆಚ್ಚಳ ಕಂಡಿದೆ. ಇದು ವಲಯದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ಸೆಪ್ಟೆಂಬರ್‌ನಲ್ಲಿ ವಲಯದ ಚಟುವಟಿಕೆಯು ಇಳಿಕೆ ಆಗಿದ್ದರು ಸಹ, ಸತತ 14ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆ. ಸೂಚ್ಯಂಕವು 50 ಮತ್ತು ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ADVERTISEMENT

‘ದೇಶದ ಸೇವಾ ವಲಯವು ಹಲವು ರೀತಿಯ ಆಪತ್ತುಗಳಿಂದ ಈಚೆಗಷ್ಟೇ ಹೊರಬಂದಿದೆ. ಸೆಪ್ಟೆಂಬರ್‌ ತಿಂಗಳ ಮಂದಗತಿಯ ಬೆಳವಣಿಗೆಯ ಹೊರತಾಗಿಯೂ ಒಟ್ಟಾರೆಯಾಗಿ ವಲಯವು ಉತ್ತಮ ಬೆಳವಣಿಗೆ ಹಾದಿಯಲ್ಲಿಯೇ ಇದೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ತಿಳಿಸಿದ್ದಾರೆ.

‘ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಹೆಚ್ಚಳ ಮಾಡಿದ್ದರಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯದ ವೇಳೆಗೆ ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಿನ ಕುಸಿತ ಕಂಡಿತು. ಇದು ಭಾರತದ ಆರ್ಥಿಕತೆಗೆ ಹೆಚ್ಚುವರಿ ಸವಾಲಾಗಿದೆ’ ಎಂದು ಲಿಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕರೆನ್ಸಿ ಅಸ್ಥಿರವಾಗಿರುವುದು ಹಣದುಬ್ಬರದ ಆತಂಕಕ್ಕೆ ಕಾರಣ
ವಾಗಿದೆ. ಆಮದಾಗುವ ವಸ್ತುಗಳು ದುಬಾರಿ ಆಗಲಿವೆ. ದರ ಏರಿಕೆಯನ್ನು ನಿಯಂತ್ರಿಸಲು ಮತ್ತು ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಆರ್‌ಬಿಐ ಬಡ್ಡಿದರ ಏರಿಕೆ ಮಾಡುವುದನ್ನು ಮುಂದುವರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಲಿಮಾ ಹೇಳಿದ್ದಾರೆ.

ವಿದ್ಯುತ್‌, ಆಹಾರ ಮತ್ತು ಸರಕುಗಳ ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ಕಾರ್ಯಾಚರಣಾ ವೆಚ್ಚವು ಸೆಪ್ಟೆಂಬರ್‌ನಲ್ಲಿ ಮತ್ತಷ್ಟು ಏರಿಕೆ ಆಗಿದೆ ಎಂದು ಕಂಪನಿಗಳು ತಿಳಿಸಿವೆ.

ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಹಾಗೂ ಮಾರಾಟಕ್ಕೆ ಮತ್ತೊಂದು ಸುತ್ತಿನ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿದೆ. ಹೀಗಿದ್ದರೂ ಉದ್ಯೋಗ ಸೃಷ್ಟಿ ಪ್ರಮಾಣವು ಆಗಸ್ಟ್‌ಗಿಂತಲೂ ಕಡಿಮೆ ಇದೆ ಎಂದು ಸಂಸ್ಥೆಯು ತಿಳಿಸಿದೆ.

ತಯಾರಿಕೆ ಮತ್ತು ಸೇವಾ ವಲಯಗಳ ಬೆಳವಣಿಗೆಯನ್ನು ತಿಳಿಸುವ ಕಂಪೊಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಆಗಸ್ಟ್‌ನಲ್ಲಿ 58.2ರಷ್ಟು ಇದ್ದಿದ್ದು ಸೆಪ್ಟೆಂಬರ್‌ನಲ್ಲಿ 55.1ಕ್ಕೆ ಇಳಿಕೆ ಆಗಿದೆ. ಇದು ಸಹ ಮಾರ್ಚ್‌ ನಂತರದ ಅತ್ಯಂತ ಕನಿಷ್ಠ ಬೆಳವಣಿಗೆ ದರ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.