ADVERTISEMENT

ಸೇವಾ ವಲಯದ ಚಟುವಟಿಕೆ ಇಳಿಕೆ

ಪಿಟಿಐ
Published 5 ಆಗಸ್ಟ್ 2020, 14:35 IST
Last Updated 5 ಆಗಸ್ಟ್ 2020, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಜುಲೈ ತಿಂಗಳಲ್ಲಿಯೂ ಚೇತರಿಕೆ ಕಂಡುಬಂದಿಲ್ಲ. ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ ಪರಿಣಾಮವಾಗಿ ಬೇಡಿಕೆ ತಗ್ಗಿದ್ದು, ಕಂಪನಿಗಳು ಕಾರ್ಯಾಚರಣೆ ನಿಲ್ಲಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಸಿಬ್ಬಂದಿ ಸಂಖ್ಯೆಯನ್ನೂ ಕಡಿಮೆ ಮಾಡಬೇಕಾಯಿತು. ಈ ಕಾರಣಗಳಿಂದಾಗಿ ಸೇವಾ ವಲಯದ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಕಂಪನಿ ವಿವರಿಸಿದೆ.

ಸರ್ವೀಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜೂನ್‌ನಲ್ಲಿ 33.7 ಇತ್ತು. ಇದಕ್ಕೆ ಹೋಲಿಸಿದರೆ ಜುಲೈನಲ್ಲಿ 34.2ಕ್ಕೆ ಅಲ್ಪ ಏರಿಕೆ ಕಂಡಿದೆ. ಆದರೆ, ಚಟುವಟಿಕೆಗಳು ಚೇತರಿಸಿಕೊಂಡಿವೆ ಎಂದು ಹೇಳಬೇಕಾದರೆ ಸೂಚ್ಯಂಕವು 50 ಅಥವಾ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿರಬೇಕು.

ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಸೇವಾ ವಲಯದ ಚೇತರಿಕೆಗೆ ಇನ್ನೂ ಕೆಲವು ತಿಂಗಳುಗಳೇ ಬೇಕಾಗಲಿವೆ. ದೇಶದಾದ್ಯಂತ ಅನ್‌ಲಾಕ್‌ ಆರಂಭವಾಗಿದ್ದರೂ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಾಗೂ ಅಲ್ಲಲ್ಲಿ ಜಾರಿಗೊಳಿಸುತ್ತಿರುವ ಲಾಕ್‌ಡೌನ್‌ನಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಒಟ್ಟಾರೆ ಬೇಡಿಕೆ ತಗ್ಗಿರುವುದರಿಂದ ಸೇವಾ ವಲಯದ ಕಂಪನಿಗಳು ಜುಲೈನಲ್ಲಿ ಇನ್ನಷ್ಟು ಉದ್ಯೋಗ ಕಡಿತ ಮಾಡಿವೆ. ಉದ್ಯೋಗ ಕಡಿತದ ಪ್ರಮಾಣವು ಅತ್ಯಂತ ವೇಗವಾಗಿದೆ.

ತಯಾರಿಕೆ ಮತ್ತು ಸೇವಾ ವಲಯಗಳೆರಡರ ಚಟುವಟಿಕೆಗಳನ್ನು ತೋರಿಸುವ ಸೂಚ್ಯಂಕವು ಜೂನ್‌ನಲ್ಲಿ 37.8 ರಷ್ಟಿದ್ದಿದ್ದು ಜುಲೈನಲ್ಲಿ 37.2ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.