ADVERTISEMENT

ಮಾರ್ಚ್‌ನಲ್ಲಿ ಸೇವಾ ವಲಯದ ಚಟುವಟಿಕೆ ಅಲ್ಪ ಇಳಿಕೆ

ಪಿಟಿಐ
Published 7 ಏಪ್ರಿಲ್ 2021, 13:58 IST
Last Updated 7 ಏಪ್ರಿಲ್ 2021, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಮತ್ತು ವೆಚ್ಚ ಹೆಚ್ಚಳದ ಕಾರಣಗಳಿಂದಾಗಿ ದೇಶದ ಸೇವಾ ವಲಯದ ಚಟುವಟಿಕೆಗಳು ಮಾರ್ಚ್‌ ತಿಂಗಳಿನಲ್ಲಿ ತುಸು ಇಳಿಕೆಯಾಗಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಯನ್ನು ಸೂಚಿಸುವ ಸೂಚ್ಯಂಕವು ಫೆಬ್ರುವರಿಯಲ್ಲಿ 55.3ರಷ್ಟು ಇತ್ತು. ಇದು ಮಾರ್ಚ್‌ನಲ್ಲಿ 54.6ಕ್ಕೆ ಇಳಿದಿದೆ. ಈ ವಲಯದ ಬೆಳವಣಿಗೆಯ ವೇಗ ತಗ್ಗಿದ್ದರೂ, ಸತತ ಆರನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಹಾದಿಯಲ್ಲಿಯೇ ಇದೆ ಎಂದು ಸಂಸ್ಥೆ ತಿಳಿಸಿದೆ. ಸೂಚ್ಯಂಕವು 50ರ ಮಟ್ಟಕ್ಕಿಂತ ಹೆಚ್ಚಿಗೆ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ಕೆಲವು ರಾಜ್ಯಗಳಲ್ಲಿ ಮತ್ತೆ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಏಪ್ರಿಲ್‌ನಲ್ಲಿ ವಲಯದ ಬೆಳವಣಿಗೆ ಗಮನಾರ್ಹ ಇಳಿಕೆ ಕಾಣಬಹುದು ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಲಸಿಕೆ ಲಭ್ಯತೆಯಲ್ಲಿ ಇನ್ನಷ್ಟು ಸುಧಾರಣೆ ಆಗಲಿದ್ದು, ಇದರಿಂದಾಗಿ ಸೋಂಕು ಹರಡುವಿಕೆ ಕಡಿಮೆಯಾಗಲಿದೆ. ಆ ಮೂಲಕ ಆರ್ಥಿಕತೆ ಚೇತರಿಕೆಗೆ ಬೆಂಬಲ ಸಿಗಲಿದೆ ಎನ್ನುವ ಭರವಸೆಯನ್ನು ಕಂಪನಿಗಳು ಹೊಂದಿವೆ ಎಂದೂ ತಿಳಿಸಿದ್ದಾರೆ.

ಭಾರತದ ಸೇವೆಗಳಿಗೆ ಜಾಗತಿಕ ಮಾರುಕಟ್ಟೆಗಳಿಂದ ಬರುತ್ತಿರುವ ಬೇಡಿಕೆಯು ಸತತ 13ನೇ ತಿಂಗಳಿನಲ್ಲಿಯೂ ಕುಸಿತ ಕಂಡಿದೆ ಎಂದು ಸಂಸ್ಥೆಯು ಹೇಳಿದೆ. ವಲಯದ ವೆಚ್ಚವು ಹೆಚ್ಚಳ ಕಂಡಿದೆ. ಹೀಗಿದ್ದರೂ ಪೈಪೋಟಿಯ ಒತ್ತಡದಿಂದಾಗಿ ಬಹುಪಾಲು ಕಂಪನಿಗಳು ಶುಲ್ಕವನ್ನು ಹೆಚ್ಚು ಏರಿಕೆ ಮಾಡಿಲ್ಲ. ಉದ್ಯೋಗ ಲಭ್ಯತೆಯ ಪ್ರಮಾಣವು ಮಾರ್ಚ್‌ನಲ್ಲಿಯೂ ಕಡಿಮೆ ಇದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.