ADVERTISEMENT

ನವದೆಹಲಿ: ಸೇವಾ ಚಟುವಟಿಕೆ 12 ವರ್ಷಗಳ ಗರಿಷ್ಠ

ಬೇಡಿಕೆ ಹೆಚ್ಚಳ, ಹೊಸ ವಹಿವಾಟುಗಳಲ್ಲಿ ಏರಿಕೆ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌

ಪಿಟಿಐ
Published 4 ಮಾರ್ಚ್ 2023, 5:03 IST
Last Updated 4 ಮಾರ್ಚ್ 2023, 5:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಫೆಬ್ರುವರಿಯಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಶುಕ್ರವಾರ ಹೇಳಿದೆ.

ಸೇವಾ ವಲಯದ ಚಟುವಟಿಕೆಯನ್ನು ತಿಳಿಸುವ ಪಿಎಂಐ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜನವರಿಯಲ್ಲಿ 57.2ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ 59.4ಕ್ಕೆ ಏರಿಕೆ ಆಗಿದೆ. ಈ ಮೂಲಕ 12 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ.

ಬೇಡಿಕೆ ಹೆಚ್ಚಾಗುತ್ತಿರುವುದು ಮತ್ತು ಕಂಪನಿಗಳಿಗೆ ಸಿಗುತ್ತಿರುವ ಹೊಸ ವಹಿವಾಟುಗಳಲ್ಲಿ ಏರಿಕೆ ಆಗುತ್ತಿರುವ ಕಾರಣಗಳಿಂದಾಗಿ ಉತ್ತಮ ಬೆಳವಣಿಗೆ ಸಾಧ್ಯವಾಗಿದೆ ಎಂದು ಅದು ತಿಳಿಸಿದೆ.

ADVERTISEMENT

ಬೇಡಿಕೆ ಹೆಚ್ಚಾಗುತ್ತಿರುವುದು ಮತ್ತು ಸ್ಪರ್ಧಾತ್ಮಕ ದರ ನೀತಿಯಿಂದಾಗಿ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದಾಗಿ ತೀವ್ರಗತಿಯ ಬೆಳವಣಿಗೆ ಸಾಧ್ಯವಾಗಿದೆ ಎಂದು ಎಸ್ ಆ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರ ಸಹ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ವೆಚ್ಚವು ಎರಡೂವರೆ ವರ್ಷಗಳಲ್ಲಿಯೇ ನಿಧಾನಗತಿಯ ಏರಿಕೆ ಕಂಡಿದೆ. ಸೇವೆಗಳ ಮೇಲಿನ ವೆಚ್ಚದಲ್ಲಿ ಆಗುತ್ತಿರುವ ಏರಿಕೆಯು 12 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಕಂಪನಿಗಳಿಗೆ ಸಿಗುತ್ತಿರುವ ಹೊಸ ಯೋಜನೆಗಳು ಫೆಬ್ರುವರಿಯಲ್ಲಿ ಹೆಚ್ಚಾಗಿವೆ. ಹಲವು ಕಂಪನಿಗಳು ಸ್ಪರ್ಧಾತ್ಮಕ ದರ ನೀತಿಯನ್ನು ಅನುಸರಿಸುತ್ತಿರುವುದರಿಂದ ಮಾರಾಟ ಹೆಚ್ಚಾಗಿದೆ ಎಂದು ಸಂಸ್ಥೆಯು ಹೇಳಿದೆ. ಹೀಗಿದ್ದರೂ ಕಂಪನಿಗಳ ಸಾಮರ್ಥ್ಯದ ಪೂರ್ಣ ಬಳಕೆಯು ಇನ್ನೂ ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಯು ಅಲ್ಪ ಹೆಚ್ಚಳವನ್ನಷ್ಟೇ ಕಂಡಿದೆ ಎಂದು ತಿಳಿಸಿದೆ.

ತಯಾರಿಕೆ ಮತ್ತು ಸೇವಾ ವಲಯಗಳ ಚಟುವಟಿಕೆಗಳನ್ನು ತಿಳಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಜನವರಿಯಲ್ಲಿ 57.5ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ 59ಕ್ಕೆ ಏರಿಕೆ ಆಗಿದೆ. ತಯಾರಿಕಾ ವಲಯಕ್ಕೆ ಹೋಲಿಸಿದರೆ ಸೇವಾ ವಲಯದಲ್ಲಿ ಹೊಸ ವಹಿವಾಟುಗಳು ವೇಗವಾಗಿ ಬೆಳವಣಿಗೆ ಕಂಡಿವೆ. ಎರಡೂ ವಲಯಗಳಲ್ಲಿನ ಮಾರಾಟದಲ್ಲಿ ಆಗಿರುವ ಬೆಳವಣಿಗೆಯು 11 ವರ್ಷಗಳಲ್ಲಿಯೇ ಕ್ಷಿಪ್ರಗತಿಯದ್ದಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.